LATEST NEWS
ಚೀನಾ ಮತ್ತೆ ಕೊರೊನಾ ವೈರಸ್ ಹೆಚ್ಚಳ – ಪ್ರಮುಖ ಕೈಗಾರಿಕಾ ಪ್ರದೇಶ ಲಾಕ್ಡೌನ್

ಚೀನಾ: ಚೀನಾದಲ್ಲಿ ಓಮಿಕ್ರಾನ್ ವೈರಸ್ ತನ್ನ ಪ್ರಭಾವ ಬೀರಿದ್ದು, ಈ ಹಿನ್ನಲೆ ಚೀನಾ ತನ್ನ ಪ್ರಮುಖ ಕೈಗಾರಿಕಾ ಪ್ರದೇಶವನ್ನು ಲಾಕ್ಡೌನ್ ಮಾಡಿದೆ. ಭಾನುವಾರ ದಾಖಲಾಗಿರುವ ಒಟ್ಟು ಹೊಸ ಕೇಸ್‌ಗಳು, ಕಳೆದ 2 ವರ್ಷಗಳಲ್ಲೇ ಅಧಿಕವಾಗಿದ್ದು, ಭಾನುವಾರ ಬರೋಬ್ಬರಿ 3,393 ಹೊಸ ಕೇಸ್‌ಗಳು ಚೀನಾದಲ್ಲಿ ದೃಢಪಟ್ಟಿವೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಸದ್ಯ ಚೀನಾದಲ್ಲಿ ಕೊರೊನಾದ ಹೊಸ ಅಲೆಯೊಂದು ಪ್ರಾರಂಭವಾಗಿದೆ. ಚೀನಾದ ಶಾಂಘಾಯ್ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಲಾಕ್‌ಡೌನ್ ಹೇರಲಾಗಿದ್ದು, ಚೀನಾದ ಈಶಾನ್ಯ ಭಾಗದಲ್ಲಿ ಇರುವ ನಗರಗಳಲ್ಲಿ ಹಿಂದೆಂದೂ ಕಂಡು ಕೇಳರಿಯದಂಥಾ ಮುನ್ನೆಚ್ಚರಿಕಾ ಕ್ರಮ ಹಾಗೂ ನಿರ್ಬಂಧ ವಿಧಿಸಲಾಗಿದೆ. ಚೀನಾದ ಒಟ್ಟು 19 ಪ್ರಾಂತ್ಯಗಳು ಸ್ಥಳೀಯವಾಗಿ ಕೊರೊನಾ ಸ್ಫೋಟ ದಾಖಲಿಸಿವೆ. ಚೀನಾದಲ್ಲಿ ದೃಢಪಡುತ್ತಿರುವ ಕೊರೊನಾ ಪ್ರಕರಣಗಳ ಪೈಕಿ ಓಮಿಕ್ರಾನ್ ಹಾಗೂ ಡೆಲ್ಟಾ ತಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಈಗ ಮುನ್ನೆಚ್ಚರಿಕೆ ಕ್ರಮವಾಗಿ ಚೀನಾದ ಪ್ರಮುಖ ನಗರಗಳಲ್ಲಿ ಬೃಹತ್ ಗುಂಪು ಸೇರುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.ಮತ್ತೊಮ್ಮೆ ಸಾಮೂಹಿಕ ಪರೀಕ್ಷೆಗಳಿಗೆ ಕರೆ ನೀಡಿರುವುದಲ್ಲದೆ, ಶಾಲಾ ತರಗತಿಗಳನ್ನು ಕಡಿತಗೊಳಿಸಲಾಗಿದೆ
