LATEST NEWS
ಚಿಣ್ಣರ ಹೆಗಲಿಗೂ ಬಂತು ಬ್ರಹ್ಮಕಲಶ ನಿರ್ವಹಣೆಯ ಜವಾಬ್ದಾರಿ
ಚಿಣ್ಣರ ಹೆಗಲಿಗೂ ಬಂತು ಬ್ರಹ್ಮಕಲಶ ನಿರ್ವಹಣೆಯ ಜವಾಬ್ದಾರಿ
ಪುತ್ತೂರು ಜನವರಿ 7: ಯಾವುದೇ ಒಂದು ಸಭೆ, ಸಮಾರಂಭ ನಡೆಯುವುದಕ್ಕೂ ಮೊದಲು ಕಾರ್ಯಕ್ರಮದ ಅನುಷ್ಟಾನಕ್ಕಾಗಿ ಕೆಲವೊಂದು ಸಮಿತಿಗಳ ರಚಿಸುವುದು ಸಾಮಾನ್ಯ. ಇಂಥಹ ಸಮಿತಿಗಳಲ್ಲಿ ಹೆಚ್ಚಾಗಿ ತರುಣರಿಂದ ಹಿಡಿದು ವಯೋವೃದ್ಧರಿಗೆ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇಂಥ ಸಮಾರಂಭಗಳ ನಿರ್ವಹಣೆಗೆ ಚಿಣ್ಣರ ಸಮಿತಿಯನ್ನೂ ರಚಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕೋಡಿಂಬಾಡಿಯ ಮಠಂದಬೆಟ್ಟು ಮಹಿಷಮರ್ಧಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಹಲವು ಸಮಿತಿಗಳ ರಚನೆಯಾಗಿದ್ದು, ಈ ಬಾರಿ ವಿಶೇಷವಾಗಿ ಚಿಣ್ಣರ ಸಮಿತಿಗೆ ಅವಕಾಶವನ್ನು ನೀಡಲಾಗಿದೆ. ಮಕ್ಕಳಲ್ಲಿ ಕಾರ್ಯಕ್ರಮಗಳ ನಿರ್ವಹಣೆಯ ಬಗ್ಗೆ ಜಾಗೃತಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೋಡಿಸಿಕೊಳ್ಳುವಿಕೆ, ಅತಿಥಿ ಸತ್ಕಾರ ಹೀಗೆ ಹಲವು ರೀತಿಯ ಸಂಸ್ಕಾರಗಳನ್ನು ಎಳವೆಯಲ್ಲೇ ಬೆಳೆಯಬೇಕು ಎನ್ನುವ ದೂರದೃಷ್ಠಿಯಿಂದ ಈ ಸಮಿತಿಯನ್ನು ರಚನೆ ಮಾಡಲಾಗಿದೆ.
ಚಪ್ಪರ ಸಮಿತಿ, ಪ್ರಚಾರ ಸಮಿತಿ, ಆರ್ಥಿಕ ಸಮಿತಿ ಹೀಗೆ ಹಲವು ರೀತಿಯ ಸಮಿತಿಗಳಲ್ಲಿ ವಯಸ್ಸಿಗೆ ಬಂದವರೇ ಇರುತ್ತಿದ್ದು, ಅವರವರ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಸಮಿತಿಯ ಪ್ರತಿಯೊಬ್ಬ ಸದಸ್ಯನ ಕರ್ತವ್ಯವೂ ಆಗಿರುತ್ತದೆ. ಅದೇ ರೀತಿ ಈ ಚಿಣ್ಣರ ಸಮಿತಿಗೆ ಬ್ರಹ್ಮಕಲಶೋತ್ಸವದ ಸಂದರ್ಭದ ಪ್ರಸಾದ ತಯಾರಿಸುವ, ಅತಿಥಿಗಳಿಗೆ ಪಾನೀಯ ವಿತರಿಸುವ , ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತಹ ಗುರುತರವಾದ ಜವಾಬ್ದಾರಿಗಳನ್ನು ನೀಡಲಾಗಿದೆ. ಈಗಾಗಲೇ ಈ ಸಂಬಂಧ ಚಿಣ್ಣರ ಸಮಿತಿಯು ಹಲವಾರು ಮೀಟಿಂಗ್ ಗಳಿಗೂ ಭಾಗವಹಿಸಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯಪ್ರವೃತ್ತವಾಗಿದೆ.
ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಚಿಣ್ಣರಿಗೆ ಕೇವಲ ಪ್ರೇಕ್ಷಕನಾಗಿರುವ ಅವಕಾಶಗಳನ್ನು ನೀಡಲಾಗಿದೆ. ಆದರೆ ಪುತ್ತೂರಿನ ಈ ದೇವಳ ಸಮಿತಿ ಚಿಣ್ಣರ ಮೇಲೂ ಜವಾಬ್ದಾರಿ ಹೇರುವ ಮೂಲಕ ಸಂಸ್ಕಾರದ ಜೊತೆಗೆ ಜವಾಬ್ದಾರಿಯನ್ನೂ ಬೆಳೆಸುವ ಕಾರ್ಯಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆಯೂ ಆಗಿದೆ.