DAKSHINA KANNADA
ತಾಯಿ ಸಾವಿನ ಬಗ್ಗೆ ತಿಳಿಸಿದರೂ ಬಾರದ ಮಕ್ಕಳು – ಅನಾಥಾಶ್ರಮದಿಂದಲೇ ಅಂತ್ಯಸಂಸ್ಕಾರ
ಉಪ್ಪಿನಂಗಡಿ ಜನವರಿ 08: ಈಕೆ 90ರ ಹಾಸುಪಾಸಿನ ವೃದ್ಧೆ, ಮಕ್ಕಳಿಗೆ ಜನ್ಮವಿತ್ತ ಮಹಾತಾಯಿ. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅನಾಥಶ್ರಮ ಸೇರಿದ್ದ ಲಕ್ಷ್ಮೀ ಹೆಗ್ಡೆ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಹೆತ್ತಮ್ಮನ ಭಾನುವಾರ ಅಂತ್ಯಸಂಸ್ಕಾರ ನರವೇರಿಸಲು ಮಕ್ಕಳು ಆಗಮಿಸಬಹುದೆಂಬ ನಿರೀಕ್ಷೆ ಸುಳ್ಳಾಗಿ ಅನಾಥಾಶ್ರಮದವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆ ನಡೆದಿದೆ.
ಲಕ್ಷ್ಮೀ ಹೆಗ್ಡೆ ಅವರು ಉಪ್ಪಿನಂಗಡಿ ಸಮೀಪದಲ್ಲಿ ಸ್ವಂತ ಮನೆ ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಇವರು ನ್ಯಾಯ ಬಯಸಿ ಅಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳನ್ನು ಕರೆದು ತಾಯಿಯನ್ನು ಪೋಷಿಸುವಂತೆ ಮಕ್ಕಳಿಗೆ ತಿಳಿಹೇಳಿದಾಗ ಮಕ್ಕಳಿಂದ ಅಸಹಕಾರ ವ್ಯಕ್ತವಾಗಿತ್ತು. ವೃದ್ಧೆಗೆ ನೆರವಾದ ಪೊಲೀಸ್ ಅಧಿಕಾರಿ. ಠಾಣೆಯಲ್ಲಿ ಕಣ್ಣೀರು ಸುರಿಸುತ್ತ ಆಸರೆಗಾಗಿ ಯಾಚಿಸುತ್ತಿದ್ದ ಲಕ್ಷ್ಮೀ ಹೆಗ್ಡೆ ಅವರನ್ನು ಅಂದಿನ ಠಾಣಾಧಿಕಾರಿ ನಂದ ಕುಮಾರ್, ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರು. ಆಗಾಗ ಆಶ್ರಮಕ್ಕೆ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಕನ್ಯಾನದ ಆಶ್ರಮದಲ್ಲಿ ಚೆನ್ನಾಗಿಯೇ ಇದ್ದ ಲಕ್ಷ್ಮೀ ಹೆಗ್ಡೆ ಭಾನುವಾರ ಹೃದಯಾಘಾತಕ್ಕೀಡಾಗಿ ನಿಧನರಾದರು. ಆಶ್ರಮಕ್ಕೆ ಸೇರಿದಾಗ ನೀಡಲಾದ ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದ ಆಶ್ರಮದವರು, ನಿಧನಸುದ್ದಿಯನ್ನು ತಿಳಿಸಿ, ಶವದ ಅಂತ್ಯವಿಧಿ ನೆರವೇರಿಸಲು ಬನ್ನಿ, ಶವವನ್ನು ತೆಗೆದುಕೊಂಡು ಹೋಗುವಂತೆ ಕೋರಿದ್ದಾರೆ. ಆದರೆ ಮನವಿಗೆ ಸ್ಪಂದನ ದೊರೆಯದೇ ಇದ್ದಾಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್ ಅವರನ್ನು ಸಂಪರ್ಕಿಸಲಾಯಿತು. ಕರ್ತವ್ಯದ ಕಾರಣಕ್ಕೆ ದೂರದೂರಿನಲ್ಲಿದ್ದ ನಂದಕುಮಾರ್ ಅವರಿಗೆ ಸಕಾಲದಲ್ಲಿ ಆಗಮಿಸಲು ಅಸಾಧ್ಯವಾಗಿತ್ತು. ಈ ಮಧ್ಯೆ ಆಶ್ರಮದ ಕ್ರಮದಂತೆ ಮೃತರ ಅಂತ್ಯವಿಧಿಯನ್ನು ಅಲ್ಲಿಯೇ ನೆರವೇರಿಸಲಾಯಿತು.