KARNATAKA
ಡಿಜೆ ಸೌಂಡ್ ಮೊರೆ ಹೋದ ಚಿಕ್ಕಮಂಗಳೂರು ರೈತರು …!
ಚಿಕ್ಕಮಗಳೂರು, ಮಾರ್ಚ್ 03: ಕಾಡಾನೆ ದಾಳಿಯಿಂದ ಕಂಗಾಲಾಗಿರುವ ಚಿಕ್ಕಮಗಳೂರು ತಾಲೂಕಿನ ಹಂಪಾಪುರ, ಬೀಕನಹಳ್ಳಿಯ ರೈತರು ತೋಟದಲ್ಲಿ ಮೈಕ್ ಸೆಟ್ ಹಾಕಿ ಆನೆ ಹಾವಳಿಗೆ ವಿರಾಮ ಹಾಕಲು ಮುಂದಾಗಿದ್ದಾರೆ.
ತಾಲೂಕಿನ ಬೀಕನಹಳ್ಳಿ, ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ ಆನೆ ಹಾವಳಿ ಮಿತಿ ಮೀರಿದೆ. ಆನೆ ಹಾವಳಿಯಿಂದ ರೈತರು ಹೊಲ-ಗದ್ದೆ-ತೋಟಗಳಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೆಳೆಗಳನ್ನ ಉಳಿಸಿಕೊಳ್ಳುವುದೇ ದೊಡ್ಡ ಸವಾಲು ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.
ರೈತರಿಗೆ ಪ್ರಕೃತಿಯಿಂದ ಬೆಳೆ ಉಳಿಸಿಕೊಳ್ಳುವುದಕ್ಕಿಂತ ಕಾಡಾನೆ, ಕಾಡುಪ್ರಾಣಿಗಳಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಬೀಕನಹಳ್ಳಿ ಹಾಗೂ ಹಂಪಾಪುರ ಗ್ರಾಮದ ತೋಟಗಳಲ್ಲಿ ಸುಮಾರು 30 ಕಡೆ ಅಲ್ಲಲ್ಲೇ ಮೈಕ್ ಸೆಟ್ ಕಟ್ಟಿದ್ದಾರೆ. ಈ ಮೈಕ್ ಸೆಟ್‍ನಲ್ಲಿ ಆನೆ ಬಂತು ಓಡಿಸ್ರೋ…. ಈ ಕಡೆ ಬಂತು…. ಆ ಕಡೆ ಬಂತು… ಅಂತ ಕೂಗುವ ಶಬ್ಧ. ಪಟಾಕಿ ಸಿಡಿಯುವ ಶಬ್ಧ. ಕಾಡು ಪ್ರಾಣಿಗಳು ಕೂಗುವ ಶಬ್ಧ ಬರುತ್ತಿರುತ್ತೆ. ಇದರಿಂದ ಆನೆ ಹಾವಳಿ ತಕ್ಕ ಮಟ್ಟಿಗೆ ಕಡಿಮೆಯಾಗುತ್ತೆ ಅನ್ನೋದು ರೈತರ ನಂಬಿಕೆ.
ಸದ್ಯಕ್ಕೆ ಆನೆ ಹಾವಳಿಯೂ ತಕ್ಕ ಮಟ್ಟಿಗೆ ಕಡಿಮೆಯಾಗಿದೆ. ಈಗಾಗಲೇ, ಕೆಲ ತೋಟದ ಮರಗಳಲ್ಲಿ ಮೈಕ್ ಸೆಟ್ ಜೋತು ಬಿದ್ದಿವೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೂ ಕಾಡಾನೆಗಳ ಅಬ್ಬರ ಜೋರಿತ್ತು. ಹಲವು ವರ್ಷಗಳಿಂದ ಇದೆ. ಹಳ್ಳಿಗಳಲ್ಲಿ ರೈತರಂತೆ ಠಿಕಾಣಿ ಹೂಡಿವೆ. ಆನೆಯಿಂದ ನಾಲ್ಕೈದು ಜನ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಈಗ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಕ್ಕೆರಡು ಬಾರಿ ಆನೆಗಳ ಹಿಂಡು ಬಂದು ಹೋಗುವುದು ಸಾಮಾನ್ಯವಾಗಿದೆ.
ಹೀಗಾಗಿ ಗುಡ್ಡದ ಪಕ್ಕದಲ್ಲಿರುವ ಜಮೀನುಗಳಲ್ಲಿ ಕಾಡಾನೆಗಳ ದಾಳಿಯಾಗದಂತೆ ರೈತರು ಡಿಜೆ ಸೌಂಡ್ ಮೊರೆ ಹೋಗಿದ್ದಾರೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಡಿಜೆ ಸೌಂಡ್ ಶುರುವಾಗುತ್ತೆ. ಶಬ್ಧಕ್ಕೆ ಹೆದರುವ ಕಾಡಾನೆಗಳು ಜಮೀನಿನತ್ತ ಬರುವುದಿಲ್ಲ ಅನ್ನೋದು ರೈತರೇ ಕಂಡುಕೊಂಡ ಮಾಸ್ಟರ್ ಪ್ಲಾನ್. ಆದರೆ ಆನೆಗಳಿಗೂ ಬುದ್ಧಿ ಇರುತ್ತೆ. ಆನೆಗಳಿಗೆ ಈ ಮೈಕ್ ನಮ್ಮನ್ನ ಯಾಮಾರಿಸೋಕೆ ಹಾಕಿರುವುದು ಎಂದು ಗೊತ್ತಾದರೆ ಮೊದಲು ಕಿತ್ತಾಕೋದು ಮೈಕ್‍ಗಳನ್ನ. ಆಗ ಮತ್ತೆ ಆನೆ ಹಾವಳಿ ಹೆಚ್ಚಾಗುವದರಲ್ಲಿ ಸಂಶಯವೇ ಇಲ್ಲ. ಹೀಗಾಗಿ, ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾಡುಪ್ರಾಣಿಗಳು, ಆನೆಗಳಿಂದ ಜನರ ಜೀವ ಹಾಗೂ ಬೆಳೆ ಎರಡನ್ನೂ ಉಳಿಸುವುದಕ್ಕೆ ಮುಂದಾಗಬೇಕೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.