KARNATAKA
ತಮ್ಮದೇ ಆದೇಶ ಉಲ್ಲಂಘಿಸಿ..ಸನ್ಮಾನ ಸ್ವೀಕರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು ಸೆಪ್ಟೆಂಬರ್ 05: ಸರಕಾರದ ಕಾರ್ಯಕ್ರಮಗಳಲ್ಲಿ ಹಾರ ತುರಾಯಿ ನಿಷೇಧ ಮಾಡಿ ಸಿಂಪಲ್ ಸಿಎಂ ಎಂದು ಹೆಸರು ಮಾಡಿದ್ದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಗ ತಾವೇ ಮಾಡಿದ್ದ ನಿಯಮವನ್ನು ಉಲ್ಲಂಘಿಸಿ, ಸನ್ಮಾನ ಮಾಡಿಸಿಕೊಂಡಿರುವ ಘಟನೆ ನಡೆದಿದೆ.
ಇಂದು ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ’ ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು ಮತ್ತು ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನಿತರಾದರು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಇದೇ ರೀತಿ ಸನ್ಮಾನಿಸಲಾಯಿತು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ವೆಚ್ಚದ ಉಡುಗೊರೆಗಳನ್ನು ನೀಡುವುದನ್ನು ನಿಷೇಧಿಸಿದ ಆದೇಶವನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಲ್ಲಂಘಿಸಿದ್ದಾರೆ. ಈ ಹಿಂದೆ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿಯವರು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಹಾರ, ತುರಾಯಿ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದರು.