DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ಗಲಾಟೆ ಚೈತ್ರಾ ಕುಂದಾಪುರ ನ್ಯಾಯಾಂಗ ಬಂಧನ ವಿಸ್ತರಣೆ
ಕುಕ್ಕೆ ಸುಬ್ರಹ್ಮಣ್ಯ ಗಲಾಟೆ ಚೈತ್ರಾ ಕುಂದಾಪುರ ನ್ಯಾಯಾಂಗ ಬಂಧನ ವಿಸ್ತರಣೆ
ಪುತ್ತೂರು ನವೆಂಬರ್ 5: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 19 ರ ವರೆಗೆ ವಿಸ್ತರಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಸಂಬಂಧಿಸಿದ ವಿವಾದದಲ್ಲಿ ಚೈತ್ರಾ ಕುಂದಾಪುರ ತಂಡದವರು ಹಾಗೂ ಗುರುಪ್ರಸಾದ್ ಪಂಜ ಅವರ ನಡುವೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೊಡೆದಾಟ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡದ ಇತರ 6 ಮಂದಿಯ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಚೈತ್ರಾ ಕುಂದಾಪುರ ಹಾಗೂ 6 ಮಂದಿಗೆ ನವೆಂಬರ್ 3 ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿತ್ತು.
ನವೆಂಬರ್ 3 ರ ಶನಿವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ನ್ಯಾಯಾಂಗ ಬಂಧನದಲ್ಲಿರುವ ಚೈತ್ರ ಹಾಗೂ ಆಕೆಯ ತಂಡದ ಇತರ ಆರು ಸದಸ್ಯರನ್ನು ಖುದ್ದು ಸೋಮವಾರ ಪುತ್ತೂರು ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಸೂಚನೆ ನೀಡಿತ್ತು. ಅಲ್ಲದೆ ಮೇಲ್ನೋಟಕ್ಕೆ ಆರೋಗ್ಯವಾಗಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಪ್ರಶ್ನಿಸಿದ್ದ ನ್ಯಾಯಾಧೀಶರು ಚೈತ್ರಾ ಹಾಗೂ ಉಳಿದ ಆರು ಮಂದಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಜೈಲು ಸೂಪರಿಟೆಂಡೆಂಟ್ ನ್ನು ಸೋಮವಾರದಂದು ನ್ಯಾಯಾಲಯದಲ್ಲಿ ಹಾಜರಿರಲು ಸೂಚಿಸಿದ್ದರು. ಅಲ್ಲದೆ ಆಕೆ ಮತ್ತು ತಂಡಕ್ಕೆ ನೀಡಿದ ಚಿಕಿತ್ಸೆ ಬಗ್ಗೆಯೂ ನ್ಯಾಯಾಲಯಕ್ಕೆ ವಿವರ ಸಲ್ಲಿಸಲು ನ್ಯಾಯಾಧೀಶರು ಆದೇಶಿಸಿದ್ದರು.
ಈ ಹಿನ್ನಲೆಯಲ್ಲಿ ಚೈತ್ರಾ ಮತ್ತವರ ತಂಡವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲದೇ ಚೈತ್ರಾ ತಂಡದೊಂದಿಗೆ ಮಂಗಳೂರು ಜೈಲು ಸೂಪರಿಟೆಂಡೆಂಟ್ ಮತ್ತು ಚಿಕಿತ್ಸೆ ನೀಡಿದ ವೈದ್ಯರು ಕೂಡ ಹಾಜರಾಗಿದ್ದರು. ಆಕೆಯ ಆರೋಗ್ಯದ ಬಗ್ಗೆ ರಿಪೋರ್ಟ್ ನೀಡಿದ ವೈದ್ಯರು, ಚೈತ್ರಾ ಆರೋಗ್ಯದಲ್ಲಿ ಸಮಸ್ಯೆಯಿಲ್ಲ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಚೈತ್ರಾ ಕುಂದಾಪುರ ನವೆಂಬರ್ 19 ರವರೆಗೆ ಜೈಲಲ್ಲೆ ಕಳೆಯಬೇಕಾಗಿದೆ.