DAKSHINA KANNADA
ಪುತ್ತೂರು – ಚೆಲ್ಯಡ್ಕ ಮುಳುಗು ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ
ಪುತ್ತೂರು ಜೂನ್ 28: ಮುಳುಗು ಸೇತುವೆ ಎಂದೇ ಕುಖ್ಯಾತಿ ಹೊಂದಿರುವ ಪುತ್ತೂರು-ಪರ್ಲಡ್ಕ-ಕುಂಜೂರುಪಂಜ-ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿರುವ ಸೇತುವೆ ಶಿಥಿಲಾವಸ್ಥೆಯಲ್ಲಿರುವ ಹಿನ್ನಲೆ ಶುಕ್ರವಾರದಿಂದ ಜಾರಿಗೆ ಬರುವಂತೆ ರಾತ್ರಿ ಎಲ್ಲ ವಾಹನ ಹಾಗೂ ಹಗಲು ವೇಳೆ ಭಾರಿ ವಾಹನ ಸಂಚಾರ ನಿಷೇಧಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ.
ಭಾರಿ ಮಳೆಯಿಂದಾಗಿ ಗುರುವಾರ ಮುಳಗಡೆಗೊಂಡಿದ್ದ, ಶಿಥಿಲಾವಸ್ಥೆಯಲ್ಲಿರುವ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದ ಮುಳುಗು ಸೇತುವೆಯ ಬಳಿಗೆ ಶುಕ್ರವಾರ ಭೇಟಿ ನೀಡಿ ಸೇತುವೆಯ ವೀಕ್ಷಣೆ ನಡೆಸಿದರು. ಈ ವೇಳೆ ಸ್ಥಳೀಯರಿಂದ ಸೇತುವೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಭದ್ರತೆಯ ದೃಷ್ಟಿಯಿಂದ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ವರೆಗೆ ರಸ್ತೆ ಬಂದ್ ಮಾಡಿ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗುವುದು. ಹಗಲು ವೇಳೆಯೂ ಬಸ್, ಲಾರಿ ಸೇರಿದಂತೆ ಭಾರಿ ವಾಹನ ಸಂಚಾರ ನಿಷೇಧಿಸಲಾಗುವುದು. ಮಳೆಗಾಲದಲ್ಲಿ ಯಾವುದೇ ಅವಘಡ ನಡೆಯದಂತೆ ಈ ಭದ್ರತಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದರು. ಹಗಲು ವೇಳೆ ಸೇತುವೆಯ ಬಳಿ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯಿಂದ ಪ್ರತಿ ದಿನ ಒಬ್ಬರು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದರು.