KARNATAKA
ಚಾರ್ಮಾಡಿ ಘಾಟಿಯಲ್ಲಿ 24 ಗಂಟೆ ಲಘು ವಾಹನ ಸಂಚಾರಕ್ಕೆ ಅವಕಾಶ
ಚಿಕ್ಕಮಗಳೂರು ಸೆಪ್ಟೆಂಬರ್ 1: ಚಾರ್ಮಾಡಿ ಘಾಟಿಯಲ್ಲಿ ಮಂಗಳವಾರದಿಂದ ದಿನದ ಇಪ್ಪತ್ತನಾಲ್ಕು ಗಂಟೆಯೂ ಲಘು ವಾಹನಗಳ ಜೊತೆ ಕೆ.ಎಸ್.ಆರ್.ಟಿ.ಸಿ. ಮಿನಿ ಬಸ್ ಗಳಿಗೂ ಅವಕಾಶ ನೀಡಲಾಗಿದೆ.
ಮಳೆ-ಗುಡ್ಡ ಕುಸಿತದಿಂದ ಕಾರಣದಿಂದ ಚಾರ್ಮಾಡಿ ಘಾಟಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಸದ್ಯ 24 ಗಂಟೆಗಳ ಕಾಲ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಆದೇಶ ನೀಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಗುಡ್ಡ ಕುಸಿತ ಸಂಭವಿಸಿದ ಪರಿಣಾಮ ಈ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಮಾತ್ರ ಅವಕಾಶ ನೀಡಲಾಗಿತ್ತು ಆದರೆ ಇಂದು ಜಿಲ್ಲಾಧಿಕಾರಿಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಲಘು ವಾಹನ ಸಂಚಾರಕ್ಕೆ ಅನುಮತಿಯನ್ನು ನೀಡಿದ್ದಾರೆ.
ಚಿಕ್ಕಮಗಳೂರಿಂದ ಮೂಡಿಗೆರೆ ತಾಲೂಕು ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗ ಇದಾಗಿದ್ದು, ಭಾರೀ ಮಳೆಗೆ ಗುಡ್ಡ ಕುಸಿತ, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿಷೇಧ ವಿಧಿಸಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಚಾರ್ಮಾಡಿ ಘಾಟ್ ಮಾರ್ಗದಲ್ಲಿ 24 ಗಂಟೆಗಳ ಕಾಲ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.