Connect with us

LATEST NEWS

ಕೊರೊನಾ ಸಂಕಷ್ಟ : 1 ಕೋಟಿ ಸಾಲ ಪಡೆಯಲು ಮುಂದಾದ ಕೃಷ್ಣ ಮಠ

ಉಡುಪಿ: ಕೊರೊನಾ ಎಫೆಕ್ಟ್ ಧಾರ್ಮಿಕ ಕ್ಷೇತ್ರಗಳ ಆರ್ಥಿಕ ಸ್ಥಿತಿಯನ್ನೆ ಬುಡಮೇಲು ಮಾಡಿದೆ. ಕೊರೊನಾ ಲಾಕ್ ಡೌನ್ ಸಂದರ್ಭ ಸಂಪೂರ್ಣ ಬಂದ್ ಆಗಿದ್ದ ದೇವಾಲಯಗಳನ್ನು ಅನ್ ಲಾಕ್ ನಲ್ಲಿ ತೆರೆಯಲಾಗಿದ್ದರೂ ಭಕ್ತರು ದೇವಸ್ಥಾನಕ್ಕೆ ಬರದೆ ದೇವಾಲಯಗಳ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಈ ಸಾಲಿಗೆ ಈಗ ಉಡುಪಿ ಕೃಷ್ಣ ಮಠ ಸೇರಿದ್ದು, ಕೃಷ್ಣ ಮಠದ ನಿರ್ವಹಣೆಗಾಗಿ ಬ್ಯಾಂಕ್ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಹಾಗೂ ಸರ್ಕಾರದಿಂದ ಹಣ ಕೇಳುವುದು ಸೂಕ್ತವಲ್ಲ ಎಂಬ ಕಾರಣಕ್ಕಾಗಿ ಬ್ಯಾಂಕಿನಿಂದ ಸಾಲ ಕೇಳಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.


ಮಠದ ನಿರ್ವಹಣೆ, ದುರಸ್ತಿ ಇತ್ಯಾದಿ ಕೈಗೊಳ್ಳಲಾಗಿದ್ದು, ಬ್ಯಾಂಕ್‌ಗೆ ಸಾಲಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಮಾರು ಮಠದ ಆಶ್ರಯದಲ್ಲಿ ಶೈಕ್ಷಣಿಕ ಸಂಸ್ಥೆಗಳಿದ್ದರೂ ಅದರಿಂದ ಮಠ ಹಣ ಅಪೇಕ್ಷಿಸುವುದು ಸರಿಯಲ್ಲ. ಮಠದ ಆದಾಯದ ಪಾಲನ್ನು ಶೈಕ್ಷಣಿಕ ಸಂಸ್ಥೆಗಳಿಗೆ ನೀಡುವ ಪರಿಪಾಠವಿದೆ. ಆದರೆ, ಶೈಕ್ಷಣಿಕ ಸಂಸ್ಥೆಗಳಿಂದ ಮಠ ಆದಾಯ ಪಡೆದಿಲ್ಲ ಎಂದರು.


ಶ್ರೀಕೃಷ್ಣ ಮಠದಲ್ಲಿ ಒಟ್ಟು 300 ಜನರು ಸಿಬ್ಬಂದಿ ಇದ್ದಾರೆ. 150 ಮಂದಿ ಪ್ರಸ್ತುತ ಕೆಲಸ ಮಾಡುತ್ತಿದ್ದು, ಉಳಿದ 150 ಮಂದಿ ಸದ್ಯ ಮನೆಯಲ್ಲೇ ಇದ್ದಾರೆ. ಅವರಿಗೂ ತೊಂದರೆ ಆಗಬಾರದು ಅಂತ ಸಂಬಳ ವಿತರಣೆ ಮಾಡಲಾಗುತ್ತಿದೆ. ಊಟ, ಗೋಶಾಲೆ ಖರ್ಚು ನಿರ್ವಹಣೆ ಆಗಬೇಕಾಗಿದೆ. ಹೀಗಾಗಿ ತಿಂಗಳಿಗೆ ಸುಮಾರು 30-40 ಲಕ್ಷ.ರೂ. ಖರ್ಚಾಗುತ್ತಿದೆ. ಒಟ್ಟು 5 ತಿಂಗಳಿನಿಂದ ಮಠಕ್ಕೆ ಭಕ್ತರ ಪ್ರವೇಶವಿಲ್ಲ. ಹೀಗಾಗಿ ಭಕ್ತರಿಂದ ಬರುವ ಆದಾಯ ನಿಂತುಹೋಗಿದೆ. ಆದರೆ ಈ ಅವಧಿಯಲ್ಲಿ ಕನಿಷ್ಠ 1.5 ಕೋ.ರೂ. ಖರ್ಚು ಬಂದಿದೆ. ಹೀಗಾಗಿ ಶ್ರೀಕೃಷ್ಣ ಮಠದ ನಿರ್ವಹಣೆಗಾಗಿ 1 ಕೋ.ರೂ. ಸಾಲಕ್ಕೆ ಬ್ಯಾಂಕ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಅದಮಾರು ಮಠದಿಂದ 60ಲಕ್ಷ ರೂಪಾಯಿ ಪಡೆದುಕೊಳ್ಳಲಾಗಿದ್ದು. ಬ್ಯಾಂಕ್‌ನಲ್ಲಿ ಮಾಡಿದ ಸಾಲವನ್ನು ಶ್ರೀಕೃಷ್ಣ ಮಠದಲ್ಲಿ ಆದಾಯ ಬಾರದೆ ಇದ್ದರೂ ಅದಮಾರು ಮಠದಿಂದ ತೀರಿಸಬೇಕು. ಯಾಕೆಂದರೆ ಈ ಬಾರಿ ಪರ್ಯಾಯ ಅದಮಾರು ಶ್ರೀಗಳದ್ದು.

Facebook Comments

comments