LATEST NEWS
ಅಗಸ್ಟ್ 9 ರಿಂದ ಚಾರ್ಮಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಮಂಗಳೂರು ಅಗಸ್ಟ್ 08:ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರು ಭಾರೀ ಮಳೆಯಿಂದಾಗಿ ಘಾಟಿ ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗುತ್ತಿರುವ ಹಿನ್ನಲೆ ಅಗಸ್ಟ್ 9 ರಿಂದ ಚಾರ್ಮಾಡಿ ಘಾಟ್ ನಲ್ಲಿ ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ದಕ್ಷಿಣಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 234 ರ ಚಾರ್ಮಾಡಿ ಘಾಟ್ ನಲ್ಲಿ ನಾಳೆಯಿಂದ ಮುಂದಿನ ಆದೇಶದವರೆಗೆ ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಅಡಿಯಲ್ಲಿ ಬರುವ 76 ರಿಂದ 86.20 ಕಿ. ಮೀ ವರೆಗೆ ಚಾರ್ಮಾಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಆಗಸ್ಟ್ 11ರ ಮಧ್ಯರಾತ್ರಿ 12 ಗಂಟೆ ವರೆಗೆ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶ ಹೊರಡಿಸಿರುತ್ತಾರೆ.

ಇನ್ನು ಬದಲಿ ಮಾರ್ಗವಾಗಿ ಉಜಿರೆ- ಧರ್ಮಸ್ಥಳ -ಕೊಕ್ಕಡ- ಗುಂಡ್ಯ – ಶಿರಾಡಿ(ರಾಹೆ 75) ಮತ್ತು ಮೂಡಿಗೆರೆ ಹ್ಯಾಂಡ್ ಪೋಸ್ಟ್- ಜನ್ನಾಪುರ- ಆನೆಹಲ್- ಶಿರಾಡಿ- ಗುಂಡ್ಯ(ರಾಹೆ 75)ಮುಖಾಂತರ ಸಂಚರಿಸಬಹುದಾಗಿದೆ.