KARNATAKA
ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್ ಖಾತೆ ಸ್ಥಗಿತ ಸೊತ್ತುಗಳು ಮುಟ್ಟುಗೋಲು..!
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿಗಳ ಆಸ್ತಿ ಕುರಿತು ಶೋಧವನ್ನು ಸಿಸಿಬಿ ಮುಂದುವರೆಸಿದೆ.
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿಗಳ ಆಸ್ತಿ ಕುರಿತು ಶೋಧವನ್ನು ಸಿಸಿಬಿ ಮುಂದುವರೆಸಿದೆ.
ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಠೇವಣಿ ಹಾಗೂ ಕಾರನ್ನು ಸಿಸಿಬಿ ಜಪ್ತಿ ಮಾಡಿದೆ.
ಇದುವರೆಗೆ 81 ಲಕ್ಷ ನಗದು, ಎಫ್.ಡಿ ಖಾತೆಯಲ್ಲಿ ಒಟ್ಟು 1.08 ಕೋಟಿ ಠೇವಣಿ, ಮತ್ತಿತರ ಬ್ಯಾಂಕ್‌ಗಳ ಮೂಲಕ ಠೇವಣಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ ಪಡೆದಿದ್ದ 3.50 ಕೋಟಿ ರೂಪಾಯಿ ಹಣವನ್ನು ಚೈತ್ರಾ ಕುಂದಾಪುರ, ಶ್ರೀಕಾಂತ್ ಮತ್ತಿತರ ಆರೋಪಿಗಳು ಹಂಚಿಕೊಂಡಿದ್ದರು. ಹಣವನ್ನು ಆರೋಪಿಗಳು ಹಲವೆಡೆ ಹೂಡಿಕೆ ಮಾಡಿದ್ದರು.
ಹೀಗಾಗಿ, ಅವರ ಖಾತೆಗಳಿರುವ ಬಾಗಲಕೋಟೆ, ಕುಂದಾಪುರ ಹಾಗೂ ಇತರೆಡೆಯ ಬ್ಯಾಂಕ್‌ಗಳಲ್ಲಿ ಭಾನುವಾರ ಶೋಧ ನಡೆದಿತ್ತು.
ವಂಚನೆ ಹಣದಲ್ಲಿ ಆರೋಪಿಗಳು 12 ಲಕ್ಷ ರೂ ಮೌಲ್ಯದ ಕಿಯಾ ಕಾರು ಖರೀದಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ, ಸೊಲ್ಲಾಪುರದ ಬಾರ್‌ವೊಂದರ ಎದುರು ಕಾರು ನಿಲ್ಲಿಸಲಾಗಿತ್ತು. ಚೈತ್ರಾ ಸ್ನೇಹಿತ ಬಾಗಲಕೋಟೆ ಮೂಲದ ಕಿರಣ್, ಕಾರು ತೆಗೆದುಕೊಂಡು ಬಂದು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು.
ವಾಹನ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ಕಿರಣ್, ಅದೇ ಕಾರು ಬಳಸುತ್ತಿದ್ದರು. ಅವರ ಬಳಿ ಕಾರು ಇರುವುದು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಜಪ್ತಿ ಮಾಡಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ನನಗೆ ಕರೆ ಮಾಡಿದ್ದ ಚೈತ್ರಾ ಕುಂದಾಪುರ, “ಕಾರನ್ನು ಸ್ವಲ್ಪ ದಿನ ಇಟ್ಟುಕೊಳ್ಳುವಂತೆ ಹೇಳಿದ್ದರು.
ಹೀಗಾಗಿ, ತಂದು ನನ್ನ ಬಳಿ ಇಟ್ಟುಕೊಂಡಿದ್ದೆ. ವಂಚನೆಗೂ ನನಗೂ ಯಾವುದೇ ಸಂಬಂಧವಿಲ್ಲ” ಎಂದು ಕಿರಣ್ ತಿಳಿಸಿರುವುದಾಗಿ ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.