LATEST NEWS
ಸೆಂಟ್ರಲ್ ಮಾರುಕಟ್ಟೆ ಬಂದ್ ಮಾಡುವ ಜಿಲ್ಲಾಧಿಕಾರಿ ಆದೇಶಕ್ಕೆ ತಡೆಯಾಜ್ಞೆ – ಎರಡು ದಿನದಲ್ಲಿ ವ್ಯಾಪಾರ ಆರಂಭ
ಮಂಗಳೂರು ಸೆಪ್ಟೆಂಬರ್ 24: ಕೊರೊನಾ ನೆಪ ಒಡ್ಡಿ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಿದ್ದ ಜಿಲ್ಲಾಡಳಿತದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಮಧ್ಯತಂರ ತಡೆಯಾಜ್ಞೆ ನೀಡಿದ್ದು, ಈಗ ಮತ್ತೆ ಸೆಂಟ್ರಲ್ ಮಾರ್ಕೆಟ್ ನಲ್ಲಿ ವ್ಯಾಪಾರ ಚಟುವಟಿಕೆ ಆರಂಭಗೊಳ್ಳಲಿದೆ.
ಸರಿಯಾದ ಯೋಜನೆಗಳಿಲ್ಲದೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿದ್ದ ವ್ಯಾಪಾರಿಗಳನ್ನು ಪೊಲೀಸ್ ಬಲ ಪ್ರಯೋಗಿಸಿ ಏಕಾಏಕಿ ಖಾಲಿ ಮಾಡಿದ್ದ ದಕ್ಷಿಣಕನ್ನಡ ಜಿಲ್ಲಾಡಳಿತಕ್ಕೆ ಮುಖಭಂಗವಾಗಿದೆ.
ಕೊರೊನಾ ಹಿನ್ನಲೆ ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಸೆಂಟ್ರಲ್ ಮಾರುಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಈ ಹಿಂದಿನಂತೆ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಹಂಗಾಮಿ ಅಧ್ಯಕ್ಷ ಕ್ಲಾಸಿಕ್ ಹಸನ್ ತಿಳಿಸಿದ್ದಾರೆ.
ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಾನೂನುಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನೀಡಿದ ನಿರ್ದೇಶನದಂತೆ ಮಾನ್ಯತೆ ಪಡೆದ ವ್ಯಾಪಾರ ಪರವಾನಿಗೆ ಹೊಂದಿರುವ ವ್ಯಾಪಾರಸ್ಥರು ವಾಣಿಜ್ಯ ಪರವಾನಿಗೆ ಪತ್ರ, ಗುರುತು ಪತ್ರದೊಂದಿಗೆ ಮನಪಾ ಆಯುಕ್ತರನ್ನು ಸಂಪರ್ಕಿಸಲು ನೀಡಿದ ಸೂಚನೆಯಂತೆ ವ್ಯಾಪಾರಿಗಳು ಬುಧವಾರ ದಾಖಲೆಗಳೊಂದಿಗೆ ಭೇಟಿಯಾಗಿದ್ದಾರೆ.
ಸೆಪ್ಟೆಂಬರ್ 24ರಂದು ಸಂಜೆ 4ರಿಂದ 6 ಗಂಟೆ ಅವಧಿಯಲ್ಲಿ ಪಾಲಿಕೆ ಕಚೇರಿ ಸಂಕೀರ್ಣದ ಎರಡನೇ ಮಹಡಿಯಲ್ಲಿ ಪುರಾವೆ ಮತ್ತು ಇತರ ಸಂಬಂಧಿತ ದಾಖಲೆಗಳೊಂದಿಗೆ ವ್ಯಾಪಾರಿಗಳು ಆಯುಕ್ತರನ್ನು ಸಂಪರ್ಕಿಸಬೇಕು. ದಾಖಲೆಗಳ ಸರಿಯಾದ ಪರಿಶೀಲನೆಯ ಬಳಿಕ ಮತ್ತು ಕೆಲವು ಷರತ್ತುಗಳಿಗೆ ಒಳಪಟ್ಟ ನಂತರ, ಕಾನೂನುಬದ್ಧ ವ್ಯಾಪಾರ ಚಟುವಟಿಕೆಯನ್ನು ಪುನರಾರಂಭಿಸುವ ಬಗ್ಗೆ ವ್ಯಾಪಾರಿಗಳಿಗೆ ಪಾಲಿಕೆ ತಿಳಿಸಲಿದೆ ಎನ್ನುವ ಒಕ್ಕಣೆಯುಳ್ಳ ಸೂಚನೆಯನ್ನು ಸೆಂಟ್ರಲ್ ಮಾರುಕಟ್ಟೆ ದ್ವಾರಗಳಲ್ಲಿ ಅಳವಡಿಸಲಾಗಿದೆ. ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.