KARNATAKA
ಕೇಂದ್ರ ಸರಕಾರದಿಂದ ಜನರಿಗೆ ಡಬಲ್ ಶಾಕ್ – ಪೆಟ್ರೋಲ್ ಡಿಸೇಲ್ ಜೊತೆ ಎಲ್ ಪಿಜಿ ಬೆಲೆ ಏರಿಕೆ

ನವದೆಹಲಿ ಎಪ್ರಿಲ್ 07: ಕರ್ನಾಟಕದಲ್ಲಿ ಡಿಸೇಲ್ ಮೇಲೆ ಅಬಕಾರಿ ಸುಂಕ ಏರಿಕೆ ಮಾಡಿರುವುದನ್ನು ವಿರೋಧಿಸಿ ಹೋರಾಟಕ್ಕೆ ಬಿಜೆಪಿ ಮುಂದಾಗುತ್ತಿರುವ ಹೊತ್ತಿನಲ್ಲೇ ಇದೀಗ ಕೇಂದ್ರ ಸರಕಾರ ಪೆಟ್ರೋಲ್ ಡಿಸೇಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಮಾಡಿದೆ.
ಪೆ ಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ತಲಾ 2 ರೂಪಾಯಿ ಹೆಚ್ಚಿಸಿ ಕೇಂದ್ರ ಸರ್ಕಾರ ಇಂದು (ಸೋಮವಾರ) ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 13 ರೂಪಾಯಿಯಷ್ಟು ಹೆಚ್ಚಳಗೊಂಡಿದ್ದು, ಡೀಸೆಲ್ ಪ್ರತಿ ಲೀಟರ್ ಗೆ 10 ರೂಪಾಯಿ ಏರಿಕೆಯಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ. ಸದ್ಯ ಜನರಿಗೆ ಈ ಏರಿಕೆ ತಟ್ಟದೆ ಇದ್ದರೂ ಮುಂದೆ ತೈಲ ಕಂಪೆನಿಗಳು ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.

ಇನ್ನು ಅಡುಗೆ ಅನಿಲ ಪೂರೈಕೆ ಕಂಪನಿಗಳು ದರವನ್ನು ಸಿಲಿಂಡರ್‌ಗೆ ₹50 ಏರಿಕೆ ಮಾಡಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ. ಈ ಏರಿಕೆ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ. ಇದರಿಂದ 14.2 ಕೆ.ಜಿಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹803 ರಿಂದ ₹ 853ಕ್ಕೆ ಏರಿಕೆಯಾಗಲಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ₹ 503ಕ್ಕೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ದರ ಇನ್ನು ₹553ಕ್ಕೆ ಏರಿಕೆಯಾಲಿದೆ.