LATEST NEWS
ಕಣ್ಮನ ಸೆಳೆದ ವೈಭವದ ಶೋಭಾಯಾತ್ರೆ – ಮಂಗಳೂರು ದಸರಾಗೆ ತೆರೆ

ಕಣ್ಮನ ಸೆಳೆದ ವೈಭವದ ಶೋಭಾಯಾತ್ರೆ – ಮಂಗಳೂರು ದಸರಾಗೆ ತೆರೆ
ಮಂಗಳೂರು ಅಕ್ಟೋಬರ್ 20:ಪ್ರಖ್ಯಾತ ಮಂಗಳೂರು ದಸರಾ ನವರಾತ್ರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯಿತು.
ಸಂಜೆ 4 ಗಂಟೆಗೆ ಗಣಪತಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಶಾರದಾ ಮಂಟಪದಿಂದ ಶಾರದಾ ಮಾತೆಯನ್ನು ಹೊತ್ತುಕೊಂಡು ಬರುವಾಗ ಜನಾರ್ದನ ಪೂಜಾರಿ ಅವರು ಸಾಥ್ ನೀಡಿದರು. ಕುದ್ರೋಳಿ ಕ್ಷೇತ್ರದ ಮುಂಭಾಗದಲ್ಲಿ ಬಂದ ಶಾರದಾ ಮಾತೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆ ಆರಂಭವಾಯಿತು.

ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ಶ್ರೀಕ್ಷೇತ್ರದಿಂದ ಹೊರಟು ಕಂಬ್ಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ಭಾಗ್, ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀವೆಂಕಟರಮಣ ದೇವಸ್ಥಾನದ ಮುಂಭಾಗದಿಂದ , ಚಿತ್ರಾ ಟಾಕೀಸ್, ಅಳಕೆಯಾಗಿ ಶ್ರೀಕ್ಷೇತ್ರಕ್ಕೆ ತೆರಳಿತು.
ನಿನ್ನೆ ಸಂಜೆಯಿಂದ ಶೋಭಾಯಾತ್ರೆಯು ನಗರದೆಲ್ಲೆಡೆ ಸಂಚರಿಸಿ ಇಂದು ಮುಂಜಾನೆ 5.30ಕ್ಕೆ ಶ್ರೀ ಕ್ಷೇತ್ರ ಕುದ್ರೋಳಿಯನ್ನು ಪ್ರವೇಶಿಸಿತು. ಬಳಿಕ ಶ್ರೀ ದೇವರ ಒಂದೊಂದೇ ವಿಗ್ರಹವನ್ನು ದೇವಳದ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು. ಕೊನೆಗೆ ಶ್ರೀ ಶಾರದಾ ಮಾತೆಯ ವಿಗ್ರಹಕ್ಕೆ ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಕಲ್ಯಾಣಿಯಲ್ಲಿ ದೇವರ ಬಲಿಸೇವೆ ಹಾಗೂ ತೆಪ್ಪೋತ್ಸವ ನೆರವೇರಿಸಿ ನಂತರ ಶ್ರೀ ಶಾರದಾಮಾತೆಯ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.