ಸರಣಿ ರಜೆ – ಪ್ರವಾಸಿಗರು ಸಮುದ್ರಕ್ಕೀಳಿಯುವ ಮುನ್ನ ಎಚ್ಚರ
ಮಂಗಳೂರು ಅಕ್ಟೋಬರ್ 20: ಸರಣಿ ರಜೆ ಇರುವ ಹಿನ್ನಲೆಯಲ್ಲಿ ಕರಾವಳಿಗೆ ಬರುವ ಪ್ರವಾಸಿಗರು ಸಮದ್ರಕ್ಕೆ ಇಳಿಯುವ ಮೊದಲು ಎಚ್ಚರಿಕೆ ವಹಿಸಿ ಎಂದು ಮೀನುಗಾರರು ಮನವಿ ಮಾಡಿದ್ದಾರೆ.
ಸರಣಿ ರಜೆ ಇರುವ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಕರಾವಳಿಯ ಧಾರ್ಮಿಕ ಪ್ರದೇಶಗಳ ಭೇಟಿಗೆ ಜನರು ಆಗಮಿಸುತ್ತಿದ್ದು, ಧಾರ್ಮಿಕ ಕೇಂದ್ರಗಳ ಭೇಟಿ ನಂತರ ಪ್ರವಾಸಿಗರು ಸೀದಾ ಸಮುದ್ರ ವಿಕ್ಷಣೆಗೆ ತೆರಳುತ್ತಿದ್ದಾರೆ.
ಸಮುದ್ರದ ಅಲೆಗಳ ತೀವೃತೆಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಹಿನ್ನಲೆಯಲ್ಲಿ ಸಮುದ್ರಕ್ಕೆ ಇಳಿದು ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವ ಪ್ರಕರಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ನಿನ್ನೆ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮಲ್ಪೆ ಸಮುದ್ರದಲ್ಲಿ ಇಳಿದ ಇಬ್ಬರು ಪ್ರವಾಸಿಗರು ನೀರು ಪಾಲಾಗಿದ್ದಾರೆ. ಅಲ್ಲದೆ ಬೆಳ್ತಂಗಡಿಯಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ಇಳಿದ ಯುವಕನೋರ್ವ ನೀರುಪಾಲಾಗಿರುವ ಘಟನೆ ನಡೆದಿದೆ.
ಈ ಹಿನ್ನಲೆಯಲ್ಲಿ ಪ್ರವಾಸಿಗರು ಕರಾವಳಿಯ ನದಿ ಅಥವಾ ಕಡಲಿಗೆ ಇಳಿಯುವ ಮೊದಲು ಎಚ್ಚರವಹಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಸಮುದ್ರ ಮಧ್ಯೆ ಶಾಂತ ವಾತಾವರಣವಿದ್ದು, ದಡದಲ್ಲಿ ಅಲೆಗಳ ಸ್ಥಿತಿ ಭಯಂಕರವಾಗಿದೆ ಎಂದು ಮೀನುಗಾರರು , ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಬೀಚ್ ನಲ್ಲಿ ಎಚ್ಚರ ತಪ್ಪಿದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಸರಣಿ ರಜೆ ಹಿನ್ನಲೆಯಲ್ಲಿ ಬೀಚ್ ಗೆ ಪ್ರವಾಸಿಗರು ಆಗಮಿಸುವ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಲೈಫ್ ಗಾರ್ಡ್ , ಪೊಲೀಸ್ ಸಿಬ್ಬಂದಿ ಮನವಿ ಮಾಡುತ್ತಿದ್ದರು, ಕೆಲವು ಪ್ರವಾಸಿಗರು ಕಿವಿಗೊಡುತ್ತಿಲ್ಲ , ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸಿಗರು ತೀವ್ರ ಎಚ್ಚರವಹಿಸಬೇಕಿದೆ ಎಂದು ಮನವಿ ಮಾಡಲಾಗಿದೆ.