DAKSHINA KANNADA
ಸಿಸಿಬಿ ತಂಡದಿಂದ ಉಳ್ಳಾಲದಲ್ಲಿ ದಾಳಿ, ಹೊಸ ವರ್ಷ ಸಂಭ್ರಮಕ್ಕೆ ಮಾರಾಟಕ್ಕೆ ತಂದ 5.11 ಲಕ್ಷದ ಡ್ರಗ್ಸ್ ವಶ..!
ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ MDMA ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ ಒಟ್ಟು 5,11,000 ರೂ ಮೌಲ್ಯದ ಸೊತ್ತು ವಶಕ್ಕೆಪಡೆದಿದ್ದಾರೆ. ಉಳ್ಳಾಲ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಎದುರು ಫೀಜಾ ಮಾಲ್ ಮೈದಾನದ ಬಳಿ ಒಬ್ಬ ವ್ಯಕ್ತಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಉಳ್ಳಾಲ ದರ್ಗಾ ರಸ್ತೆಯ ಮಹಮ್ಮದ್ ರಮೀಜ್ ಆಲಿಯಾಸ್ ಲೆಮನ್ ಟೀ ರಮೀಜ್ ಬಂಧಿತ ಆರೊಪಿಯಾಗಿದ್ದಾನೆ. ಆರೋಪಿ ಬೆಂಗಳೂರಿನಿಂದ MDMA ಎಂಬ ಮಾದಕ ವಸ್ತುವನ್ನು ಖರೀದಿ ಮಾಡಿ ತಂದು ಉಳ್ಳಾಲ ಪರಿಸರದಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನು.
ಆರೋಪಿತನಿಂದ 5 ಲಕ್ಷ ರೂ ಮೌಲ್ಯದ 100 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ. ಆರೋಪಿತನ ಮೇಲೆ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ, ದರೋಡೆಗೆ ಸಂಚು, ಕೊಲೆಯತ್ನ ಹಾಗೂ ಕೊಣಾಜೆ ಠಾಣೆಯಲ್ಲಿ ದರೋಡೆ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.