LATEST NEWS
ಕುಂದಾಪುರದಲ್ಲಿ ಮನೆಗೆ ನುಗ್ಗಿ ಭಾರೀ ಪ್ರಮಾಣದ ನಗ ನಗದು ದೋಚಿ ಪರಾರಿ

ಕುಂದಾಪುರದಲ್ಲಿ ಮನೆಗೆ ನುಗ್ಗಿ ಭಾರೀ ಪ್ರಮಾಣದ ನಗ ನಗದು ದೋಚಿ ಪರಾರಿ
ಉಡುಪಿ ಮೇ 4: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಒಡೆದು ಮನೆಗೆ ನುಗ್ಗಿದ ಕಳ್ಳರ ತಂಡವೊಂದು ಭಾರೀ ಪ್ರಮಾಣದ ನಗ-ನಗದು ದೋಚಿ ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಕಟ್ ಬೆಳ್ತೂರಿನಲ್ಲಿ ನಡೆದಿದೆ.
ಬೇಳ್ತೂರು ನಿವಾಸಿ ಭದ್ರಮಹಾಂಕಾಳಿ ದೈವಸ್ಥಾನದ ದೈವದ ಪಾತ್ರಿ ರವಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದ್ದು, ಕಳ್ಳರು ಸುಮಾರು 38 ಪವನ್ ಚಿನ್ನಾಭರಣ ಹಾಗೂ ಮೂರು ಲಕ್ಷಕ್ಕೂ ಅಧಿಕ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆಯ ಹಿಂಬದಿ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದು, ರೂಮಿನ ಕವಾಟಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ಇದೇ ವೇಳೆಯಲ್ಲಿ ಕವಾಟಿನಲ್ಲಿಟ್ಟಿದ್ದ ದೈವದ ಚಿನ್ನಾಭರಣಗಳನ್ನು ದೋಚದೆ ಅಲ್ಲಿಯೇ ಬಿಟ್ಟು ಹೋಗಿರುವುದು ಅಚ್ಚರಿ ಮೂಡಿಸಿದೆ. ಮನೆ ಮಾಲಿಕ ರವಿ ಕಟ್ಟಡ ಗುತ್ತಿಗೆದಾರರಾಗಿದ್ದು, ಕೆಲಸಗಾರರಿಗೆ ಸಂಬಳ ನೀಡಲು ಅಷ್ಟೊಂದು ಮೊತ್ತದ ಹಣವನ್ನು ಮನೆಯಲ್ಲಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮನೆಯವರ ಚಲನವಲನಗಳನ್ನು ಹತ್ತಿರದಿಂದಲೇ ಗಮನಿಸಿದ ವ್ಯಕ್ತಿಗಳಿಂದ ಈ ಕಳ್ಳತನ ನಡೆದಿರುವುದಾಗಿ ಶಂಕಿಸಲಾಗಿದೆ. ಸ್ಥಳಕ್ಕಾಗಮಿಸಿದ ಕುಂದಾಫುರ ಡಿವೈಎಸ್ಪಿ ದಿನೇಶ್ ಕುಮಾರ್, ಸಿಪಿಐ ಮಂಜಪ್ಪ, ಕಂಡ್ಲೂರು ಪಿಎಸ್ಐ ಶ್ರೀಧರ್ ನಾಯಕ್ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಕಳ್ಳರನ್ನು ಕೂಡಲೇ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಸ್ಥಳಕ್ಕೆ ಶ್ವಾನ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.