DAKSHINA KANNADA
ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರ ಮೇಲೆ ಮೊಕದ್ದಮೆ,ಮಂಗಳೂರು ಪೊಲೀಸರ ನಡೆಗೆ CPIM ಆಕ್ರೋಶ
ಮಂಗಳೂರು : ಪ್ಯಾಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ಖಂಡಿಸಿ ಎಡಪಕ್ಷಗಳು ಮಂಗಳೂರಿನಲ್ಲಿ ನಡೆಸಿದ ಶಾಂತಿಯುತ ಪ್ರತಿಭಟನೆಯ ವಿರುದ್ಧ ಮಂಗಳೂರು ಕಮೀಷನರೇಟ್ ಪೊಲೀಸರು ಮೊಕದ್ದಮೆ ದಾಖಲಿಸಿರುವುದು, ಕಾನೂನು ಸುವ್ಯವಸ್ಥೆಯ ನೆಪ ಒಡ್ಡಿ ಸಾಂಕೇತಿಕ ಪ್ರತಿಭಟನೆಗೂ ತಡೆ ಒಡ್ಡಲು ಯತ್ನಿಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ, ಪೊಲೀಸರ ಈ ನಡೆ ಇದು ಆತಂಕಕಾರಿ ವಿದ್ಯಾಮಾನ ಎಂದು ಹೇಳಿದೆ.
ಭಾರತ ದೇಶ ಐತಿಹಾಸಿಕವಾಗಿ ಪ್ಯಾಲೆಸ್ತೀನ್ ಜನತೆಯ ತಾಯ್ನೆಲದ ಬೇಡಿಕೆಯ ಜೊತೆಗಿದೆ, ಇಸ್ರೇಲ್ ನ ಆಕ್ರಮಣ ಹಾಗೂ ಪ್ಯಾಲೆಸ್ತೀನ್ ನಾಗರಿಕರ ಮೇಲಿನ ವಿವೇಚನಾ ರಹಿತ ಹಿಂಸೆಯ ವಿರುದ್ಧ ಇದೆ. ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ಇಸ್ರೇಲ್ ಹರಿಯ ಬಿಟ್ಟಿರುವ ಹಿಂಸೆಯ ವಿರುದ್ಧವಾಗಿ, ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳ ಪರವಾಗಿ ಇದೆ. ಹೀಗಿರುತ್ತಾ, ಮಂಗಳೂರಿನಲ್ಲಿ ಸಾಂಕೇತಿಕ ಪ್ರತಿಭಟನೆಗೂ ಅವಕಾಶ ನಿರಾಕರಿಸಿರುವುದು, ಶಾಂತಿಯುತ ಪ್ರತಿಭಟನೆ ನಡೆಸಿದ ಎಡಪಕ್ಷಗಳ ಕಾರ್ಯಕರ್ತರ ಮೇಲೆ ಪೊಲೀಸರು ಮೊಕದ್ದಮೆ ಹೂಡಿರುವುದರ ಹಿನ್ನಲೆ ಏನು ? ಎಂದು ಕಾಂಗ್ರೆಸ್ ಪಕ್ಷ ಹಾಗೂ ಸರಕಾರವನ್ನು ಸಿಪಿಐಎಂ ಪಕ್ಷ ಪ್ರಶ್ನಿಸಿದೆ. ಕಾಂಗ್ರೆಸ್ ಸರಕಾರ ಹಾಗೂ ಪಕ್ಷವು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಅದು ಆಗ್ರಹಿಸಿದೆ.
ಮಂಗಳೂರು ನಗರ ಕಮಿಷನರೇಟ್ ಪೊಲೀಸ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತರುವಾಯವೂ ಜನಪರ ಚಳವಳಿ, ಹೋರಾಟಗಳನ್ನು ಹತ್ತಿಕ್ಕುವ ಯತ್ನ ನಡೆಸುತ್ತಲೇ ಬಂದಿದೆ. ಕೋಮುವಾದಿ ಶಕ್ತಿಗಳ ಎದುರಾಗಿ ಧ್ವನಿ ಎತ್ತುವುದನ್ನು ತಡೆಯುತ್ತಿದೆ. ಈ ಹಿಂದೆಯೂ ಹಲವು ಜನಪರ ಹೋರಾಟಗಳನ್ನು ವಿವಿಧ ನಿಯಮಗಳ ನೆಪ ಮುಂದಿಟ್ಟು ಅದು ತಡೆಯಲು ನೋಡಿದೆ. ಅಂತಹ ಪ್ರತಿಭಟನೆಗಳ ಸಂದರ್ಭ ಸ್ವಯಂ ಪ್ರೇರಣೆಯಿಂದ ಮೊಕದ್ದಮೆಗಳನ್ನು ಹೂಡಿದೆ. ಈಗಿನ ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರ ಮೇಲಿನ ಧಾಳಿ ಅದರ ಮುಂದುವರಿಕೆಯೇ ಅಗಿದೆ. ಅದೇ ಸಂದರ್ಭ ಸಂಘಪರಿವಾರ, ಬಿಜೆಪಿ ಎದುರಾಗಿ ಮಂಗಳೂರು ಪೊಲೀಸರು ತೀರಾ ಮೃದುವಾಗಿದ್ದಾರೆ. ಈ ಹಿಂದೆ ಜರೋಜ ಶಾಲೆಯ ಎದುರಾಗಿ ಬಿಜೆಪಿ ಶಾಸಕರು ಇಡೀ ದಿನ ಗೂಂಡಾಗಿರಿ ಮೆರೆದಾಗ ಪೊಲೀಸ್ ಇಲಾಖೆ ಮೌನ ವಹಿಸಿತ್ತು. ಶಾಸಕ ವೇದವ್ಯಾಸ ಕಾಮತ್ ರಸ್ತೆಗಳನ್ನು ಮುಚ್ಚಿ, ನಿಯಮಗಳನ್ನು ಉಲ್ಲಂಘಿಸಿ ನಗರದಲ್ಲಿ ಆಹಾರ ಮೇಳ ಆಯೋಜಿಸಿದಾಗ, ಮೊನ್ನೆಯಷ್ಟೆ ಶಾಸಕ ಭರತ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡರು ಸುರತ್ಕಲ್ ಪೇಟೆಯಲ್ಲಿ ಯಾವ ಅನುಮತಿಯನ್ನೂ ಪಡೆಯದೆ, ಎರಡೆರಡು ದಿನಗಳ ಕಾಲ ಮುಖ್ಯ ರಸ್ತೆಗಳನ್ನು ಇಡೀ ದಿನ ಮುಚ್ಚಿ ಮನೋರಂಜನೆ ಕಾರ್ಯಕ್ರಮ ಹಮ್ಮಿಕೊಂಡಾಗ ಮಂಗಳೂರು ಪೊಲೀಸ್ ಇಲಾಖೆ ಯಾವ ತಕರಾರೂ ಎತ್ತಿರಲಿಲ್ಲ, ಬದಲಾಗಿ ಹಿರಿಯ ಪೊಲೀಸ್ ಅಧಿಕಾರಿಗಳೇ ಮುಂದೆ ನಿಂತು ಈ ನಿಯಮ ಬಾಹಿರ ಕಾರ್ಯಕ್ರಮಗಳಿಗೆ ರಕ್ಷಣೆ ಒದಗಿಸಿದ್ದರು, ಸಂಘ ಪರಿವಾರದ ದ್ವೇಷ ಭಾಷಣಗಳ, ಕೋಮು ಪ್ರಚೋದಕ ಕಾರ್ಯಕ್ರಮಗಳಿಗೂ ಯಾವುದೇ ತಕರಾರು ಇಲ್ಲದೆ ಅನುಮತಿ ನೀಡುತ್ತಾ ಬಂದಿದ್ದಾರೆ. ವಕ್ಫ್ ವಿಚಾರದಲ್ಲಿಯಂತೂ ಬಿಜೆಪಿ ಪ್ರತಿಭಟನೆ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ಎಲ್ಲಾ ವಿದ್ಯಾಮನಗಳು ಮಂಗಳೂರಿನ ಜನತೆಯ ಹಾಗೂ ಎಡಪಕ್ಷಗಳ, ಜನಚಳವಳಿಗಳ ಗಮನದಲ್ಲಿದೆ.
ಅದೇ ಸಂದರ್ಭ ಎಡಪಕ್ಷಗಳು, ಜನಪರ ಚಳವಳಿಗಳು ನಡೆಸುವ ಹೋರಾಟಗಳು ಮಾತ್ರ ಮಂಗಳೂರು ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವ ಕಾರ್ಯಕ್ರಮಗಳಾಗಿ ಕಂಡು ಬರುತ್ತಿರುವುದು ನಗರ ಪೊಲೀಸರು ಯಾರ ಪರವಾಗಿ ಕಾರ್ಯಾಚರಿಸುತ್ತಿದ್ದಾರೆ ಎಂಬುದನ್ನು ಎತ್ತಿತೋರಿಸುತ್ತದೆ. ಮಂಗಳೂರು ಪೊಲಿಸರು, ರಾಜ್ಯ ಸರಕಾರದ ಈ ನಡೆಯನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.