LATEST NEWS
ರಥಬೀದಿ ರಸ್ತೆಯಲ್ಲಿ ನಾಳಿನಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು – ಶಾಸಕ ಕಾಮತ್

ಮಂಗಳೂರು ನವೆಂಬರ್ 30: ಸ್ಮಾರ್ಟ್ ಸಿಟಿ ಯೋಜನೆಯಡಿ 17 ಕೋಟಿ ವೆಚ್ಚದಲ್ಲಿ ರಥಬೀದಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಬಹತೇಕ ಪೂರ್ಣಗೊಂಡಿದೆ. ಹಾಗಾಗಿ ನಾಳೆಯಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ರಸ್ತೆ ಕಾಂಕ್ರೀಟೀಕರಣ ಬಹುತೇಕ ಪೂರ್ಣಗೊಂಡಿದೆ. ಚರಂಡಿ ಹಾಗೂ ಮೆಸ್ಕಾಂ ಸಂಬಂಧಪಟ್ಟ ಕಾಮಗಾರಿಗಳು ಪೂರ್ಣಗೊಳಿಸುವುದು ಬಾಕಿಯುಳಿದಿದೆ. ಹಾಗಾಗಿ ಸಾರ್ವಜನಿಕರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುವುದು ಎಂದರು.

ಈ ಪರಿಸರದ ಜನರು ಕಾಮಗಾರಿ ವೇಳೆ ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಸಹಕರಿಸಿದ್ದಾರೆ. ಸಾರ್ವಜನಿಕರ ಸಹಕಾರದಿಂದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಬಾಕಿಯುಳಿದಿರುವ ಮೆಸ್ಕಾಂ ಹಾಗೂ ಚರಂಡಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಆದಷ್ಟು ಬೇಗನೇ ಉಳಿದ ಕಾಮಗಾರಿ ಪೂರ್ಣಗೊಳಿಸಿ ಒಂದು ವಾರದೊಳಗೆ ಎಲ್ಲಾ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.