LATEST NEWS
ಕಾರು ಪಾರ್ಕಿಂಗ್ ವೈರಲ್ ವಿಡಿಯೋ ಸ್ಥಳ ಈಗ ಟೂರಿಸ್ಟ್ ಸ್ಪಾಟ್

ಕಣ್ಣೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಇನ್ನೋವಾ ಪಾರ್ಕಿಂಗ್ ಸ್ಥಳ ಈಗ ಟೂರಿಸ್ಟ್ ಸ್ಪಾಟ್ ಆಗಿ ಬದಲಾಗಿದೆ.ಕೇರಳದ ವಯನಾಡ್ ನಿವಾಸಿ ಪಿ.ಜೆ ಬಿಜು ಅವರು ಮಾಹೆ ರೈಲ್ವೇ ನಿಲ್ದಾಣದ ಬಳಿ ಇರುವ ರಸ್ತೆಯ ಕಿರುದಾಗಿರುವ ಜಾಗದಲ್ಲಿ ಪಾರ್ಕ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಗ ಕಾರು ಪಾರ್ಕಿಂಗ್ ಮಾಡಿದ ಜಾಗ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿ ಕಾರು ನಿಲ್ಲಿಸಿದ ಜಾಗವನ್ನು ಪರಿಶೀಲನೆ ಮಾಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

ವಿಡಿಯೋ ವೈರಲ್ ಆದ ಬಗ್ಗೆ ಪ್ರತಿಕ್ರಿಯಿಸಿದ 42 ವರ್ಷದ ಬಿಜು, ನನ್ನ ಪತ್ನಿ ಮಾಡಿರುವ ವಿಡಿಯೋ ಇದು. ಆಕೆಗೂ ಸಹ ವಿಡಿಯೋ ಈ ಪ್ರಮಾಣದಲ್ಲಿ ವೈರಲ್ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಬಿಜು ಹೇಳುವುಂತೆ ಮನೆಯ ಈ ಜಾಗದಲ್ಲಿ ಪಾರ್ಕ್ ಮಾಡಿದ ನಾಲ್ಕನೇ ಕಾರು ಇನ್ನೋವಾ. ಈ ಮೊದಲು ಮಾರುತಿ ಅಲ್ಟೋ, ನಂತರ ಸ್ನೇಹಿತ ನೀಡಿದ ವಾಗನ್ ಆರ್, ಅಷ್ಟೇ ಅಲ್ಲದೇ ಜೀಪ್ ಸಹ ಈ ಜಾಗದಲ್ಲಿ ಪಾರ್ಕ್ ಮಾಡಿದ್ದರು. ಈ ಎಲ್ಲ ವಾಹನಗಳನ್ನು ಪಾರ್ಕ್ ಮಾಡಿದ್ದರೂ ಯಾರೂ ಗಮನ ಹರಿಸಿರಲಿಲ್ಲ ಎಂದು ಹೇಳುತ್ತಾರೆ.
ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿದಾಗ ಯಾರೊ ಒಬ್ಬರು ಎಡಿಟ್ ಮಾಡಿದ ಫೋಟೋ ಎಂದು ಹೇಳಿ ಕಮೆಂಟ್ ಮಾಡಿದ್ದರಂತೆ. ಈ ಕಾರಣಕ್ಕೆ ಅನುಮಾನ ಪರಿಹರಿಸಲು ಸಂಪೂರ್ಣವಾಗಿ ಪಾರ್ಕ್ ಮಾಡುತ್ತಿರುವ ವಿಡಿಯೋವನ್ನು ಪತ್ನಿ ಮನೆಯಿಂದ ಸೆರೆ ಹಿಡಿದಳು. ಪತ್ನಿ ಆ ವಿಡಿಯೋವನ್ನು ಸ್ನೇಹಿತೆಗೆ ಕಳುಹಿಸಿದಳು. ಆಕೆ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಬಳಿಕ ವೈರಲ್ ಆಗಿದೆ ಎಂದು ಬಿಜು ತಿಳಿಸಿದರು.
ಇನ್ನೋವಾ ಕಾರು ನನ್ನ ಸ್ನೇಹಿತನದ್ದು. ಓಣಂ ಸಮಯದಲ್ಲಿ ನಾನು ಊರಿನಲ್ಲಿ ಇರುವುದಿಲ್ಲ. ಕಾರನ್ನು ಸರ್ವಿಸ್ ಮಾಡಿಕೊಡು ಎಂದು ಹೇಳಿದ್ದ. ಹೀಗಾಗಿ ಕೆಲ ದಿನ ನಾನು ಮನೆಯ ಮುಂಭಾಗ ಪಾರ್ಕ್ ಮಾಡಿದ್ದೆ. ಓಣಂ ಮುಗಿದು ವರ್ಕ್ ಶಾಪ್ ಆರಂಭಗೊಂಡ ಬಳಿಕ ನಾನು ಕಾರು ತೆಗೆದಿದ್ದೆ. ಕಾರನ್ನು ತೆಗೆಯುವ ವೇಳೆ ಪತ್ನಿ ವಿಡಿಯೋ ಮಾಡಿದಳು ಎಂದು ಅವರು ವಿವರಿಸಿದರು
ಲಿಕ್ಕರ್ ಕಂಪನಿಯೊಂದರ ಉದ್ಯೋಗಿ ಮತ್ತು ಡ್ರೈವರ್ ಆಗಿರುವ ಬಿಜು ಅವರು ಕಳೆದ 12 ವರ್ಷಗಳಿಂದ ಮಾಹೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. 1996ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿರುವ ಇವರು ಬಸ್ ಸೇರಿದಂತೆ ಹಲವು ವಾಹನಗಳನ್ನು ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ.
ಇಷ್ಟು ಸಣ್ಣ ಜಾಗದಲ್ಲಿ ಹೇಗೆ ಸುಲಭವಾಗಿ ಪಾರ್ಕ್ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ಇದು ಸಣ್ಣ ಜಾಗವೇ? ನಾನು ಎರ್ನಾಕುಲಂ ಮತ್ತು ಕಣ್ಣೂರು ಮಧ್ಯೆ ಹಲವು ವರ್ಷಗಳ ಕಾಲ ಬಸ್ ಓಡಿಸಿದ್ದೇನೆ. ಈ ಬಸ್ಸು 12 ಮೀಟರ್ ಉದ್ದವನ್ನು ಹೊಂದಿತ್ತು. ಹೀಗಿರುವ ಇನ್ನೋವಾದ ಗಾತ್ರ ಬಸ್ಸಿಗೆ ಹೋಲಿಸಿದರೆ ಬಹಳ ಚಿಕ್ಕದು. ಯಾವುದೇ ಕಾರಿನ ಗಾತ್ರವನ್ನು ಮನಸ್ಸಿನಲ್ಲೇ ಯೋಚಿಸಿಕೊಂಡು ಆತ್ಮವಿಶ್ವಾಸದಿಂದ ಪಾರ್ಕ್ ಮಾಡಿದರೆ ಇದು ಕಷ್ಟದ ಕೆಲಸವಲ್ಲ ಎಂದು ಉತ್ತರಿಸಿದರು.
ಕಳೆದ ಮೂರು ದಿನಗಳಿಂದ ಹಲವು ವರದಿಗಾರರು ನನಗೆ ಕರೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಇದು ದೊಡ್ಡ ವಿಷಯವೇ ಇಲ್ಲ. ಯಾರೇ ಉತ್ತಮ ಚಾಲಕ ನಾನು ಪಾರ್ಕ್ ಮಾಡಿದಂತೆ ಮಾಡಬಹುದು ಎಂದು ಹೇಳಿದರು.