Connect with us

BELTHANGADI

ಸೌತಡ್ಕ ಹುಂಡಿ ಹಣ ಏಣಿಕೆ ವೇಳೆ ಹಣ ಹೊಡೆಯಲು ಪ್ಲ್ಯಾನ್ ಮಾಡಿದ ಬ್ಯಾಂಕ್ ಸಿಬ್ಬಂದಿಯ ವಿರುದ್ದ ಪ್ರಕರಣ ದಾಖಲು

ಬೆಳ್ತಂಗಡಿ ಜುಲೈ 03: ದಕ್ಷಿಣಕನ್ನಡದ ಪ್ರಖ್ಯಾತ ಬಯಲು ಗಣಪತಿ ದೇವಸ್ಥಾನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾವದಲ್ಲಿ ಕಾಣಿಕೆಯ ಹುಂಡಿ ಹಣ ಏಣಿಕೆ ವೇಳೆ ಲೆಕ್ಕಕ್ಕಿಂತ ಹೆಚ್ಚಿನ ನೋಟ್ ಗಳನ್ನು ಬಂಡಲ್ ಗಳಲ್ಲಿ ಸೇರಿಸಿದ ಆರೋಪದ ಮೇಲೆ ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಗಣೇಶ್ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ.


ಮುಜರಾಯಿ ಇಲಾಖೆಗೆ ಸೇರಿದ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಜೂನ್ 20 ರಂದು ನಡೆದಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ನೇತೃತ್ವದಲ್ಲಿ ಕಾರ್ಯ ನಿರ್ವಹಣಾಧಿಕಾರಿ, ಕೊಕ್ಕಡ ಕೆನರಾ ಬ್ಯಾಂಕ್ ಸಿಬ್ಬಂದಿ ಮ್ಯಾಥ್, ಗಣೇಶ ನಾಯ್ಕ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ನಿಯೋಜಿತರಾದ ಸಿಬ್ಬಂದಿ ಹಾಗೂ ದೇವಸ್ಥಾನದ ವತಿಯಿಂದ ಕರೆಸಿದ 42 ಸ್ವಯಂಸೇವಕರು ಮತ್ತು ದೇವಳದ 20 ಸಿಬ್ಬಂದಿ ಈ ಏಣಿಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಎಣಿಕೆ ವೇಳೆ ₹ 500, ₹200, ₹100, ₹50, ₹20 ಮತ್ತು ₹10ರ ನೋಟುಗಳನ್ನು ವಿಂಗಡಣೆ ಮಾಡಿ, ಜೋಡಿಸಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಗಣೇಶ ನಾಯ್ಕ ಕೆಲ ನೋಟುಗಳನ್ನು ಬಂಡಲ್‌ಗೆ ಹೆಚ್ಚು ಸೇರಿಸಿದ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಹಣದ ಒಂದು ಬಂಡಲ್ ತೆಗೆದು ಎಣಿಸಿದಾಗ ಅದರಲ್ಲಿ ಹೆಚ್ಚುವರಿ ನೋಟುಗಳು ಕಂಡು ಬಂದಿದ್ದವು. ಬಳಿಕ ಎಲ್ಲಾ ಬಂಡಲ್‌ಗಳನ್ನು ಮರು ಎಣಿಕೆ ಮಾಡಿದಾಗ ಒಟ್ಟು ₹40 ಸಾವಿರ ಹೆಚ್ಚುವರಿ ಹಣ ಪತ್ತೆಯಾಗಿತ್ತು. ಈ ಕುರಿತು ಜೂನ್ 26ರಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಹಿನ್ನೆಲೆಯಲ್ಲಿ ಅಪಾದಿತ ಕೆನರಾ ಬ್ಯಾಂಕ್ ಕೊಕ್ಕಡ ಶಾಖಾ ಸಿಬ್ಬಂದಿ ಗಣೇಶ ನಾಯ್ಕ್ ಅವರನ್ನು ಈಗಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *