KARNATAKA
ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆ ಕೊಲೆ – ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್!
ರಾಮನಗರ: ಸಾಲ ವಾಪಸ್ ಕೊಡುತ್ತೇನೆಂದು ಕರೆಸಿ ಮಹಿಳೆಯನ್ನ ಕೊಲೆ ಮಾಡಿ, ರೇಷ್ಮೆ ತೋಟದಲ್ಲಿ ಶವ ಹೂತಿಟ್ಟು ಆರೋಪಿ ಎಸ್ಕೇಪ್ ಆಗಿರುವ ಘಟನೆ ಕನಕಪುರ ತಾಲೂಕಿನ ಚೋಕಸಂದ್ರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮದ ನಿವಾಸಿ ಸುನಂದಮ್ಮ (65) ಕೊಲೆಯಾದ ಮಹಿಳೆ. ಚೊಕ್ಕಸಂದ್ರ ಗ್ರಾಮದ ರವಿ ಎಂಬಾತನಿಂದ ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಆರೋಪಿ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ.
2 ವರ್ಷಗಳ ಹಿಂದೆ ಸುನಂದಮ್ಮ ಎಂಬ ಮಹಿಳೆ ಬಳಿ ರವಿ ಎಂಬಾತ 20 ಸಾವಿರ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಸಾಲ ವಾಪಸ್ ನೀಡುವಂತೆ ಸುನಂದಮ್ಮ ಪದೇ – ಪದೇ ಪೀಡಿಸುತ್ತಿದ್ದ. ಹಾಗಾಗಿ ಮಂಗಳವಾರ ಸಾಲ ವಾಪಸ್ಸ್ ಕೊಡುತ್ತೇನೆ ಎಂದು ಕರೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಮಾಡಿ ಮಹಿಳೆ ಶವವನ್ನ ತನ್ನ ರೇಷ್ಮೆ ತೋಟದಲ್ಲಿ ಆರೋಪಿ ಹೂತಿಟ್ಟಿರೋದು ಬೆಳಕಿಗೆ ತಡವಾಗಿ ಬಂದಿದೆ.
ಮಂಗಳವಾರ ಸಂಜೆ ಮನೆಯಿಂದ ಹೊರಟಿದ್ದ ಸುನಂದಮ್ಮ ರಾತ್ರಿಯಾದರೂ ಮನೆಗೆ ವಾಪಸ್ಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪುತ್ರ ಕನಕಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ನಂತರ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆರೋಪಿ ರವಿ, ಸುನಂದಮ್ಮ ಬಳಿ ಸಾಲ ಪಡೆದಿದ್ದ ಅನ್ನೋದು ಗೊತ್ತಾಗಿದೆ.
ಇದರಿಂದ ಅನುಮಾನಗೊಂಡ ಪೊಲೀಸರು ರವಿ ಮನೆ, ತೋಟ ಪರಿಶೀಲನೆ ನಡೆಸುತ್ತಿದ್ದ, ಆರೋಪಿ ರವಿಗೆ ಸೇರಿದ್ದ ರೇಷ್ಮೆತೋಟದಲ್ಲಿ ಸುನಂದಮ್ಮ ಶವ ಪತ್ತೆಯಾಗಿದೆ. ಸಾಲ ವಾಪಸ್ಸ್ ಕೇಳಿದ್ದಕ್ಕೆ ಸುನಂದಮ್ಮಳನ್ನ ಕೊಲೆ ಮಾಡಿ ತನ್ನ ತೋಟದಲ್ಲೇ ಮಣ್ಣುಮಾಡಿ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
You must be logged in to post a comment Login