DAKSHINA KANNADA
ಜಮೀರ್ ಅಹ್ಮದ್ ಮುಂದಿನ ಅಧಿವೇಶನದಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ ನೋಡುವ – ಬಿ ವೈ ವಿಜಯೇಂದ್ರ ಸವಾಲು

ಮಂಗಳೂರು ನವೆಂಬರ್ 22: ಭ್ರಷ್ಟ, ದುಷ್ಟ ಸರಕಾರವನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಸಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುವಂತೆ ಮಾಡುತ್ತೇವೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಕ ಇದೇ ಮೊದಲ ಬಾರಿ ಮಂಗಳೂರಿಗೆ ಆಗಮಿಸಿದ ವಿಜಯೇಂದ್ರರಿಗೆ ಬಿಜೆಪಿ ನಾಯಕರು, ಶಾಸಕರು ಮತ್ತು ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು.
ಬಳಿಕ ಸುದ್ದಿಗೋಷ್ಟಿ ನಡೆಸಿದ ವಿಜಯೇಂದ್ರ ಅವರು ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ರಾಜ್ಯದ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆ ಕಡೆ ಗಮನ ಹರಿಸುತ್ತಿದೆ. ಲೋಕಸಭಾ ಚುನಾವಣೆ ತಯಾರಿ ಕಡೆ ಗಮನ ಕೊಡಿ. ಅದರ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಆದರೆ, ನಿಮ್ಮ ಆದ್ಯತೆ ಏನು ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರಕಾರವು ಬೇಸಿಗೆಯಲ್ಲೂ ರೈತರಿಗೆ ತೊಂದರೆ ಆಗಬಾರದೆಂದು ಕನಿಷ್ಠ 7 ಗಂಟೆ ವಿದ್ಯುತ್ ಕೊಟ್ಟಿತ್ತು ಎಂದು ನೆನಪಿಸಿದರು. ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಆಗುವುದಾಗಿ ಮುಂಚಿತವಾಗಿಯೇ ಆಲೋಚಿಸಿ ಬಿಜೆಪಿ ಸರ್ಕಾರ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಿತ್ತು. ಆದರೆ, ಮುಂಗಾರು, ಹಿಂಗಾರು ವೈಫಲ್ಯ, ಒಂದೆರಡು ತಾಸು ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದರೂ ರಾಜ್ಯ ಸರ್ಕಾರ ಹೊಣೆಗೇಡಿಯಾಗಿ ವರ್ತಿಸಿದೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು. ರೋಮ್ ಹೊತ್ತಿ ಉರಿಯಲು ದೊರೆ ಪಿಟೀಲು ಬಾರಿಸಿದ ಪರಿಸ್ಥಿತಿ ಇದೆಂದು ಕಿಡಿಕಾರಿದರು.ಆಡಳಿತಕ್ಕೆ ಬಂದು ಆರು ತಿಂಗಳಾದರೂ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮೋಜಿನಲ್ಲಿ ಮುಳುಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಸ್ವಗೃಹ ನವೀಕರಣ, ಅಲಂಕಾರಕ್ಕೆ ಕೋಟಿಗಟ್ಟಲೆ ಹಣ ಬಳಸುತ್ತಾರೆ. ಬರಗಾಲವಿದ್ದರೂ ಸಚಿವರಿಗೆ ಹೊಸ ಕಾರು ಖರೀದಿ ನಡೆದಿದೆ. ಇದು ಅವಿವೇಕತನದ ಪ್ರದರ್ಶನ ಎಂದು ಟೀಕಿಸಿದರು. ಇದು ನಾಡಿನ ರೈತರಿಗೆ ಮಾಡುವ ಅವಮಾನ. ಪದೇಪದೇ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಹಾಗಿದ್ದರೆ ರಾಜ್ಯ ಸರಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ಜವಾಬ್ದಾರಿ ಮರೆತ ರಾಜ್ಯ ಸರಕಾರದ ಕಿವಿ ಹಿಂಡುವ ಕೆಲಸವನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಾವು ಮಾಡುತ್ತೇವೆ ಎಂದು ಎಚ್ಚರಿಸಿದರು.
ಇನ್ನು ಜಮೀರ್ ಹೇಳಿಕೆ ಬಗ್ಗೆ ಪ್ರತಿಕ್ರೀಯಿಸಿದ ಬಿವೈ ವಿಜಯೇಂದ್ರ ಪುಣ್ಯಾತ್ಮನನ್ನು ಇವತ್ತು ರಸ್ತೆಯಲ್ಲಿ ಓಡಾಡಲು ಬಿಟ್ಟದ್ದೇ ನಮ್ಮ ಅಪರಾಧ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸ್ಪೀಕರ್ ಸ್ಥಾನಕ್ಕೆ ಎಲ್ಲರೂ ಪಕ್ಷಾತೀತವಾಗಿ ಗೌರವ ಕೊಡುತ್ತಾರೆ. ಆ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ಒಂದು ಜಾತಿ, ಧರ್ಮದ ಬಣ್ಣ ಕೊಡುವ ಕಾರ್ಯವನ್ನು ಜಮೀರ್ ಅಹ್ಮದ್ ಮಾಡಿದ್ದಾರೆ. ಇದು ತಲೆತಗ್ಗಿಸುವ ಕೆಲಸವಲ್ಲವೇ? ಇಷ್ಟೊತ್ತಿಗಾಗಲೇ ಅವರ ರಾಜೀನಾಮೆ ಪಡೆಯಬೇಕಿತ್ತು. ಜಮೀರ್ ಅಹ್ಮದ್ ಮುಂದಿನ ಅಧಿವೇಶನದಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ ಎಂದು ನೋಡುವುದಾಗಿ ವಿಜಯೇಂದ್ರ ಅವರು ಸವಾಲೆಸೆದರು. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಮುಂದೆ ಅದಾಗದಂತೆ ನಾವು ಇವತ್ತು ಎಚ್ಚರ ವಹಿಸಬೇಕಿದೆ. ಹಿಂದೂ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಸಂಸದ ಮತ್ತು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರು ಹಾಜರಿದ್ದರು.