LATEST NEWS
ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನ ತಮಿಳುನಾಡು ಮೂಲದ ವೈದ್ಯೆ ಆರೆಸ್ಟ್…!!

ಮಂಗಳೂರು, ಜೂ.30: ಮಂಗಳೂರು ಸಿಸಿಬಿ ಪೊಲೀಸರು ಬೃಹತ್ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದು, ವೈದ್ಯೆ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ದೇರಳಕಟ್ಟೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡಿನ ಮಂಗಲ್ಪಾಡಿಯ ಅಜ್ಮಲ್ ಟಿ. ಮತ್ತು ತಮಿಳ್ನಾಡು ಮೂಲದ ಮಿನು ರಶ್ಮಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 30 ಲಕ್ಷ ಬೆಲೆಬಾಳುವ 1.236 ಕೆಜಿ ಹೈಡ್ರೋವೀಡ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಕಾಸರಗೋಡು ಮೂಲದ ಡಾ. ನದೀರ್ ಈ ದಂಧೆಯ ಪ್ರಮುಖ ಆರೋಪಿಯಾಗಿದ್ದಾನೆ. ವೈದ್ಯನಾಗಿರುವ ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದರು.

ಈತನ ಸೂಚನೆಯ ಮೇರೆಗೆ ಕಾಂಞಂಗಾಡ್‌ನ ಹರಿಮಲ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಿನು ರಶ್ಮಿ ಮತ್ತು ಅಜ್ಮಲ್ ಎನ್ನುವವರು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದರು, ಆರೋಪಿಗಳು ಜೂನ್ 29ರಂದು ಕಾಂಞಗಾಡ್‌ನಿಂದ ರೈಲಿನ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಬಳಿಕ ಕಾರಿನಲ್ಲಿ ದೇರಳಕಟ್ಟೆಗೆ ತೆರಳಿ ಮಾರಾಟಕ್ಕೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ 1.236 ಕೆಜಿ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.