LATEST NEWS
ಪ್ರಯಾಣಿಕರಿಗೆ ನಮಾಜ್ ನಿರ್ವಹಿಸಲು ಬಸ್ ನಿಲ್ಲಿಸಿದ್ದಕ್ಕೆ ನೌಕರಿಯಿಂದ ವಜಾ: ನೊಂದ ಕಂಡಕ್ಟರ್ ಆತ್ಮಹತ್ಯೆ..!
ಮುಸ್ಲಿಂ ಪ್ರಯಾಣಿಕರು ನಮಾಜ್ ಮಾಡಲು ಅವಕಾಶ ನೀಡುವ ಸಲುವಾಗಿ ಬಸ್ ನಿಲ್ಲಿಸಿದ್ದ ಕಾರಣಕ್ಕೆ ಕೆಲಸದಿಂದ ವಜಾಗೊಂಡಿದ್ದ ಉತ್ತರ ಪ್ರದೇಶ ರಾಜ್ಯ ಸಾರಿಗೆ ಬಸ್ ಕಂಡಕ್ಟರ್, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಸದಿಲ್ಲಿ: ಮುಸ್ಲಿಂ ಪ್ರಯಾಣಿಕರು ನಮಾಜ್ ಮಾಡಲು ಅವಕಾಶ ನೀಡುವ ಸಲುವಾಗಿ ಬಸ್ ನಿಲ್ಲಿಸಿದ್ದ ಕಾರಣಕ್ಕೆ ಕೆಲಸದಿಂದ ವಜಾಗೊಂಡಿದ್ದ ಉತ್ತರ ಪ್ರದೇಶ ರಾಜ್ಯ ಸಾರಿಗೆ ಬಸ್ ಕಂಡಕ್ಟರ್, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದು ‘ಮಾನವೀಯತೆ ಪ್ರದರ್ಶಿಸಿದ್ದಕ್ಕೆ ತೆತ್ತ ಬೆಲೆ’ ಎಂದು ಮೃತನ ಕುಟುಂಬದವರು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಬರೇಲಿ- ದಿಲ್ಲಿ ಜನರಥ ಬಸ್ ಅನ್ನು ಹೆದ್ದಾರಿಯಲ್ಲಿ ನಿಲ್ಲಿಸಿದ್ದಕ್ಕೆ ಉತ್ತರ ಪ್ರದೇಶ ರಾಜ್ಯ ಸಾರಿಗೆ ಕಂಡಕ್ಟರ್ ಮೋಹಿತ್ ಯಾದವ್ (32) ಅವರನ್ನು ಕೆಲಸದಿಂದ ವಜಾ ಮಾಡಿತ್ತು .
ಇದರಿಂದ ಕೆಲಸ ಹಾಗೂ ಆದಾಯವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೋಹಿತ್, ಸೋಮವಾರ ಮೈನ್ಪುರಿಯಲ್ಲಿ ಚಲಿಸುವ ರೈಲಿನ ಮುಂದೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹಿತ್ ಯಾದವ್ ಅವರು ಕುಟುಂಬದ ಹಿರಿಯವರಾಗಿದ್ದು, ಗುತ್ತಿಗೆ ಆಧಾರದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಬರುತ್ತಿದ್ದ 17 ಸಾವಿರ ರೂ ಮಾಸಿಕ ವೇತನವೇ ಇಡೀ ಕುಟುಂಬದ ಎಂಟು ಮಂದಿಗೆ ಜೀವನಾಧಾರವಾಗಿತ್ತು.
ಉದ್ಯೋಗದಿಂದ ವಜಾಗೊಂಡ ನಂತರ ಅವರು ಅನೇಕ ಕಡೆಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಆದರೆ ಎಲ್ಲಿಯೂ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಉತ್ತರ ಪ್ರದೇಶ ಸಾರಿಗೆ ಇಲಾಖೆಯು ತಮ್ಮ ಗಂಡನ ಅಹವಾಲುಗಳನ್ನು ಆಲಿಸದಷ್ಟು ಕಿವುಡಾಗಿತ್ತು ಎಂದು ಮೋಹಿತ್ ಯಾದವ್ ಪತ್ನಿ ರಿಂಕಿ ಯಾದವ್ ಆರೋಪಿಸಿದ್ದಾರೆ.
ಬರೇಲಿಯಲ್ಲಿನ ಪ್ರಾದೇಶಿಕ ವ್ಯವಸ್ಥಾಪಕರಿಗೆ ಪತಿ ಅನೇಕ ಬಾರಿ ಕರೆ ಮಾಡಿದ್ದರು.
ಆದರೆ ಮೋಹಿತ್ ಮಾತನ್ನು ಅವರು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ ಎಂದು ದೂರಿದ್ದಾರೆ.
“ಗಂಡನ ಹೇಳಿಕೆಯನ್ನು ಕೇಳಿಸಿಕೊಳ್ಳದೆಯೇ ಗುತ್ತಿಗೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನವೀಯತೆಗಾಗಿ ನನ್ನ ಗಂಡ ಬೆಲೆ ತೆತ್ತಿದ್ದಾರೆ” ಎಂದು ಅವರು ಕಣ್ಣೀರಿಟ್ಟಿದ್ದಾರೆ.