BANTWAL
ಬಂಟ್ವಾಳ – ಖಾಸಗಿ ಬಸ್ ಗಳ ಮುಖಾಮುಖಿ ಡಿಕ್ಕಿ- ಪ್ರಯಾಣಿಕರಿಗೆ ಗಾಯ

ಬಂಟ್ವಾಳ ಡಿಸೆಂಬರ್ 17 :ಎರಡು ಖಾಸಗಿ ಬಸ್ ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚಾಲಕರು ಹಾಗೂ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿ.ರೋಡ್ ನೇತ್ರಾವತಿ ಸೇತುವೆ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ ರೋಡ್ ನೇತ್ರಾವತಿ ಸೇತುವೆ ಬಳಿ ಘಟನೆ ಸಂಭವಿಸಿದೆ. ಸೆಲಿನಾ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಹಾಗೂ ಸಜೀಪ ರೂಟ್‌ನ ಖಾಸಗಿ ಬಸ್ ಮುಖಾಮುಖಿಯಾಗಿವೆ. ಇದರಿಂದ ಎರಡೂ ಬಸ್‌ಗಳ ಚಾಲಕರು ಹಾಗೂ ಹಾಗೂ ಪ್ರಯಾಣಿಕರು ಸೇರಿ ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರೊಂದು ಬಸ್‌ಗೆ ಢಿಕ್ಕಿಯಾಗಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಇನ್ನು ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಲ್ಪ ಸಮಯ ಸಂಚಾರಕ್ಕೆ ತೊಡಕಾಯಿತು. ಕ್ರೇನ್ ಮೂಲಕ ಬಸ್‌ಗಳನ್ನು ರಸ್ತೆಯಿಂದ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.