LATEST NEWS
ಅಖಿಲ ಭಾರತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಹಳೆ ಬಂದರಲ್ಲಿ ಬೀದಿಗಿಳಿದ ಬಂದರಿನ ಹಮಾಲಿ ಕಾರ್ಮಿಕರು

ಅಖಿಲ ಭಾರತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಹಳೆ ಬಂದರಲ್ಲಿ ಬೀದಿಗಿಳಿದ ಬಂದರಿನ ಹಮಾಲಿ ಕಾರ್ಮಿಕರು
ಮಂಗಳೂರು ಜನವರಿ 7: ನರೇಂದ್ರ ಮೋದಿ ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕಾರ್ಮಿಕರ ಕಾನೂನು ಮತ್ತು ಹಕ್ಕುಗಳ ರಕ್ಷಣೆಗಾಗಿ ನಾಳೆ ಜನವರಿ 8ರಂದು ದೇಶವ್ಯಾಪಿ ನಡೆಯುವ ಕಾರ್ಮಿಕರ ಮುಷ್ಕರ ಬೆಂಬಲಿಸಿ ಬಂದರು ಶ್ರಮಿಕರ ಸಂಘ ನೇತೃತ್ವದಲ್ಲಿ ಇಂದು ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ಸಭೆ ನಡೆಸಿದರು. ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಇಂದು ಬೆಳಿಗ್ಗೆ ವಾಣಿಜ್ಯ ವಹಿವಾಟು ಆರಂಭಗೊಳ್ಳುತ್ತಿದ್ದಂತೆ ಹಳೆ ಬಂದರು ಕಾರ್ಮಿಕರ ಕಟ್ಟೆ ಬಳಿ ಸಮಾವೇಶಗೊಂಡ ಹಮಾಲಿ ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಅವರು ನರೇಂದ್ರ ಮೋದಿ ಸರಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಜಿಡಿಪಿ ಪಾತಾಳಕ್ಕೆ ಕುಸಿದಿದೆ ಉತ್ಪಾದನಾ ಮತ್ತು ನಿರ್ಮಾಣ ಕ್ಷೇತ್ರಗಳು ಜೀವನ್ಮರಣ ಸ್ಥಿತಿಯಲ್ಲಿದೆ ಇದರಿಂದಾಗಿ ಇತಿಹಾಸದಲ್ಲೇ ಕಂಡರಿಯದ ನಿರುದ್ಯೋಗ ಸಮಸ್ಯೆ ಉಂಟಾಗಿದೆ.

ಬೆಲೆ ಏರಿಕೆಯನ್ನು ನಿಯಂತ್ರಿಸಲಾಗುತ್ತಿಲ್ಲ. ದೇಶದ ಜನರು ಆರ್ಥಿಕ ಮುಗ್ಗಟ್ಟಿನಿಂದ ಹೊಟ್ಟೆಯ ಹಸಿವು ತಣಿಸಲು ಪರದಾಡುತ್ತಿರುವಾಗ ನರೇಂದ್ರ ಮೋದಿ ಸರಕಾರ ಜನರಿಗೆ ಬೇಡವಾದ NRC CAA NPR ನಂತಹ ಕೋಮುವಾದಿ ಅಜೆಂಡಾವನ್ನು ಜಾರಿಗೊಳಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮೋದಿ ಸರಕಾರದ ಎಲ್ಲಾ ಹುನ್ನಾರಗಳು ವಿಫಲಗೊಳ್ಳಲಿದೆ ಎಂದು ಹೇಳಿದ ಅವರು ನಾಳೆ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳದೆ ಮುಷ್ಕರದಲ್ಲಿ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.