KARNATAKA
ಬೆಂಗಳೂರು ಕಂಬಳಕ್ಕೆ ಸಂಸದ ಬ್ರಿಜ್ ಭೂಷಣ್ ಸಿಂಗ್ ಗೆ ಆಹ್ವಾನ – ಭಾರೀ ವಿರೋಧ

ಬೆಂಗಳೂರು ನವೆಂಬರ್ 21 : ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕಂಬಳ ಇದೀಗ ವಿವಾದಕ್ಕೆ ಕಾರಣವಾಗಿದೆ. ನವೆಂಬರ್ 25 ಹಾಗೂ 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳದ ಸಭಾ ಕಾರ್ಯಕ್ರಮಕ್ಕೆ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಭಾರತೀಯ ಕುಸ್ತಿ ಪಟುಗಳ ಒಕ್ಕೂಟದ ಮುಖ್ಯಸ್ಥರಾಗಿದ್ದ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ದೇಶವನ್ನೇ ಈ ಹೋರಾಟ ಗಮನ ಸೆಳೆದಿತ್ತು. ಅಲ್ಲದೆ ಲೈಂಗಿಕ ಪ್ರಕರಣದ ಆರೋಪಿ ಸಂಸದ ಬ್ರಿಜ್ ಭೂಷಣ್ ಅವರನ್ನು ಬಂಧನಕ್ಕೆ ಒಳಪಡಿಸಬೇಕು ಎಂದು ಆಗ್ರಹವೂ ಹೆಚ್ಚಾಗಿತ್ತು. ಈಗಾಗಲೇ ಅವರ ಮೇಲೆ ಎರಡು ಎಫ್ಐಆರ್ ಆಗಿದೆ.

ಈ ನಡುವೆ ಕಾಂಗ್ರೇಸ್ ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಅವರಿಗೆ ಆಹ್ವಾನ ನೀಡಿರುವುದಕ್ಕೆ ವ್ಯಾಪಕ ವಿರೋಧ ಎದುರಾಗಿದೆ. ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಸರ್ಕಾರದ ಸಚಿವರು ಮತ್ತು ವಿರೋಧ ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ. ಹೀಗಿರುವಾಗ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಆರೋಪಿಯನ್ನು ಕಂಬಳಕ್ಕೆ ಅಥಿತಿಯಾಗಿ ಆಹ್ವಾನ ನೀಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿದೆ.