LATEST NEWS
174 ಕೋಟಿ ರೂ. ವೆಚ್ಚದಲ್ಲಿ ಹರೇಕಳ – ಅಡ್ಯಾರ್ ಗೆ ಸಂಪರ್ಕ ಸೇತುವೆ

174 ಕೋಟಿ ರೂ. ವೆಚ್ಚದಲ್ಲಿ ಹರೇಕಳ – ಅಡ್ಯಾರ್ ಗೆ ಸಂಪರ್ಕ ಸೇತುವೆ
ಮಂಗಳೂರು ಸೆಪ್ಟಂಬರ್ 14 : ಮಂಗಳೂರು ತಾಲೂಕಿನ ಹರೇಕಳದಲ್ಲಿ ನೇತ್ರಾವತಿ ನದಿಗೆ ಸಂಪರ್ಕ ಸೇತುವೆ ಮತ್ತು ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಕಾಮಗಾರಿ ಎರಡು ವರ್ಷಗಳಲ್ಲಿ ಸಂಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ತಿಳಿಸಿದರು.
ಸಚಿವರು ಶುಕ್ರವಾರ ನೇತ್ರಾವತಿ ತೀರದ ಹರೇಕಳ ಪಾವೂರು ಕಡವಿನ ಬಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಭಾ ಕಾರ್ಯಕ್ರವiವನ್ನು ಉದ್ದೇಶಿಸಿ ಮಾತನಾಡಿ, ಜನೋಪಯೋಗಿ ಕಾರ್ಯಕ್ರಮಕ್ಕೆ ಅನುದಾನದ ಕೊರತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಶೀಘ್ರ ಟೆಂಡರ್ ಪ್ರಕ್ರಿಯೆ ಕರೆದು 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟವರಿಗೆ ಸೂಚಿಸಲಾಗಿದ್ದು, ಸಂಪರ್ಕ ಸೇತುವೆಯಿಂದ ನದಿಯ ಎರಡೂ ಭಾಗದ ಜನರಿಗೆ ಪ್ರಯೋಜನವಾಗಲಿದೆ.

ಯೋಜನೆಯು ಮಂಗಳೂರು ತಾಲೂಕು ಕೇಂದ್ರ ಸ್ಥಾನದಿಂದ 12 ಕಿ.ಮೀ. ದೂರದಲ್ಲಿದೆ. ಇಲ್ಲಿ ಜನರು ಅಡ್ಯಾರು-ಕಣ್ಣೂರಿನಿಂದ ಹರೇಕಳಕ್ಕೆ ಬರಲು ದೋಣಿಯನ್ನು ಅವಲಂಬಿಸಿದ್ದು, ರಸ್ತೆ ಮಾರ್ಗದಿಂದ ಬರಬೇಕಾದಲ್ಲಿ ಸುಮಾರು 30. ಕಿ.ಮೀ.ನಲ್ಲಿ ಸುತ್ತಿ ಬರಬೇಕಾಗುತ್ತದೆ.
ಅಡ್ಯಾರು ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ (ಎನ್‍ಎಚ್-75) ಸಂಪರ್ಕವಿದ್ದು, ಹರೇಕಳದಿಂದ 5 ಕಿ.ಮೀ. ಆಸುಪಾಸಿನಲ್ಲಿ ಅನೇಕ ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಐ.ಟಿ ಕಂಪೆನಿಗಳು ಇರುತ್ತದೆ. ಈ ಭಾಗದಲ್ಲಿ ಉಪ್ಪುನೀರು ತಡೆ ಅಣೆಕಟ್ಟು ಸಹಿತ ಸಂಪರ್ಕ ಸೇತುವೆಯನ್ನು ನಿರ್ಮಿಸುವುದು, ಬಹಳ ವರ್ಷಗಳ ಬೇಡಿಯಾಗಿದ್ದು, ಈಗ ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇರ್ಪಡೆಗೊಂಡಿರುತ್ತದೆ.
ಈ ಭಾಗವು ಸಮುದ್ರದ ಉಬ್ಬರ-ಇಳಿತಗಳ ಪ್ರಭಾವಕ್ಕೆ ಒಳಗಾಗುವ ಪ್ರದೇಶವಾಗಿದ್ದು, ಸಮುದ್ರದ ಉಪ್ಪುನೀರು ಪ್ರಸ್ತಾವಿತ ಕಾಮಗಾರಿ ನಿವೇಶನದಿಂದ ಸುಮಾರು 12 ಕಿ.ಮೀ. ಮೇಲ್ಗಡೆವರೆಗೆ ಪ್ರವೇಶಿಸಿ, ಸುತ್ತಮುತ್ತಲಿನ ಅಂತರ್ಜಲವನ್ನು ಉಪ್ಪುನೀರಿನಿಂದ ಕಲುಷಿತ ಗೊಳಿಸುತ್ತದೆ. ಪ್ರಸ್ತಾವಿತ ಪ್ರದೇಶದಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟನ್ನು ನಿರ್ಮಿಸಿದಲ್ಲಿ ಉಪ್ಪುನೀರು ಮೇಲ್ಭಾಗಕ್ಕೆ ನುಗ್ಗುವುದನ್ನು ತಡೆಯಬಹುದಲ್ಲದೆ, ಸಿಹಿ ನೀರನ್ನು ಸಂಗ್ರಹಿಸಬಹುದಾಗಿದೆ. ಸಂಗ್ರಹಗೊಂಡ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಬಹುದಲ್ಲದೆ, ಅಂತರ್ಜಲ ಮಟ್ಟವೂ ವೃದ್ದಿಯಾಗುತ್ತದೆ. ಸಂಗ್ರಹಗೊಂಡ ನೀರನ್ನು ಶುದ್ಧೀಕರಿಸಿ, ಕುಡಿಯುವ ನೀರಾಗಿ ಪರಿವರ್ತಿಸಿ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತವಾದ ಕುಡಿಯುವ ನೀರನ್ನು ಸಹ ಒದಗಿಸಬಹುದಾಗಿದೆ.