UDUPI
ಉಡುಪಿ ಕ್ಷೇತ್ರ ವ್ಯಾಪ್ತಿಯಲ್ಲಿ 88 ಕೋಟಿ ರೂಪಾಯಿಗಳ ಸೇತುವೆ ನಿರ್ಮಾಣ- ಪ್ರಮೋದ್

ಉಡುಪಿ ಕ್ಷೇತ್ರ ವ್ಯಾಪ್ತಿಯಲ್ಲಿ 88 ಕೋಟಿ ರೂಪಾಯಿಗಳ ಸೇತುವೆ ನಿರ್ಮಾಣ- ಪ್ರಮೋದ್
ಉಡುಪಿ ಫೆಬ್ರವರಿ 26 :- ಸೀತಾನದಿಗೆ ಅಡ್ಡಲಾಗಿ 9 ಕೋಟಿ ರೂ. ವೆಚ್ಚದಲ್ಲಿ 9 ತಿಂಗಳೊಳಗೆ ನಿರ್ಮಿಸಲಾದ ಕೂರಾಡಿ ನೀಲಾವರ ರಸ್ತೆ ಪಂಚಮಿಖಾನಾ ಸೇತುವೆಯನ್ನು ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಿಷನ್ 2025ರಡಿ ರೂಪಿಸಲಾದ ಯೋಜನೆಯಂತೆ 2018ರಲ್ಲೇ ಇದರಲ್ಲಿನ ಹಲವು ಕಾಮಗಾರಿಗಳನ್ನು ಸಂಪೂರ್ಣಗೊಳಿಸಿದ ತೃಪ್ತಿ ತಮಗಿದ್ದು, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ ಎಂದರು. ಉಡುಪಿ ಕ್ಷೇತ್ರಕ್ಕೆ ಸಂಬಂದಿಸಿದಂತೆ ಯಾವೆಲ್ಲ ಸೇತುವೆ, ರಸ್ತೆ ಕಾಮಗಾರಿಗಳ ಬೇಡಿಕೆಯನ್ನು ಸಲ್ಲಿಸಲಾಗಿದೆಯೋ ಅಲ್ಲಿನ ಕಾಮಗಾರಿಗಳಲ್ಲಿ ಹಲವು ಮುಗಿದಿದೆ. ಇನ್ನು ಕೆಲವು ಟೆಂಡರ್ ಆಗಿದೆ. ಉಳಿದವುಗಳ ಕಾಮಗಾರಿ ಆರಂಭವಾಗಿದೆ ಎಂದ ಸಚಿವರು, ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು.

ಸೇತುವೆ ನಿರ್ಮಾಣ ವೇಳೆ ಜನರಿಂದ ಬಂದ ಬೇಡಿಕೆಯಂತೆ ಯೋಜನೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲಾಗಿದೆ; ಇಲ್ಲಿನ ಸ್ಥಳೀಯ ಜನರು ರಸ್ತೆಗೆ ಜಾಗವನ್ನು ಬಿಟ್ಟುಕೊಟ್ಟು ರಸ್ತೆ ಸಂಪರ್ಕಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿಗೆ ಪೂರಕವಾಗಿ ನೆರವು ನೀಡಿದ ಎಲ್ಲರನ್ನೂ ಸ್ಮರಿಸಿದ ಸಚಿವರು, ಯೋಜನೆಗೆ ಅನುದಾನ ಬಿಡುಗಡೆಗೆ ನೆರವಾದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.
ನಿರಂತರ ಪಿಡಬ್ಲ್ಯುಡಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದು, ಸಮಯ ಮಿತಿಯೊಳಗೆ ಕಾಮಗಾರಿಗಳು ಮುಗಿಯುವಂತೆ ಕ್ರಮಕೈಗೊಳ್ಳಲಾಗಿದೆ ಎಂದರು. ತಮ್ಮ ಅವಧಿಯಲ್ಲಿ ಉಡುಪಿ ಕ್ಷೇತ್ರದ ಅಭಿವೃದ್ಧಿಗೆ 2003 ಕೋಟಿ ರೂ.ಗಳ ಅನುದಾನವನ್ನು ತರಲಾಗಿದ್ದು ಸದ್ವಿನಿಯೋಗವನ್ನು ಖಾತರಿಪಡಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳಾಗಿವೆ ಎಂದರು. ಪೆರಂಪಳ್ಳಿ, ಮಣಿಪಾಲ ಸೇತುವೆ, ರಸ್ತೆಗಳು ಸಂಪೂರ್ಣಗೊಳ್ಳುವುದರಿಂದ ಮಣಿಪಾಲಕ್ಕೆ ನೀಲಾವರದಿಂದ ಹತ್ತು ನಿಮಿಷಗಳ ಅವಧಿಯಲ್ಲಿ ತಲುಪಲು ಸಾಧ್ಯ. ಸಂಪರ್ಕ ಸೇತುವೆಗಳಿಂದ ಎಲ್ಲರಿಗೂ ಅನುಕೂಲ ಎಂದರು.