Connect with us

    LATEST NEWS

    ಉಸ್ತುವಾರಿ ಸಚಿವರಿಂದ ಸ್ಥಳದಲ್ಲೇ 206 ಪಡಿತರ ಚೀಟಿ ವಿತರಣೆ

    ಉಸ್ತುವಾರಿ ಸಚಿವರಿಂದ ಸ್ಥಳದಲ್ಲೇ 206 ಪಡಿತರ ಚೀಟಿ ವಿತರಣೆ

    ಉಡುಪಿ ಫೆಬ್ರವರಿ 26 : ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಅಧಿಕಾರ ಪಡೆದಾಗಿನಿಂದ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಬಡವರಿಗೆ ಪಡಿತರ ಚೀಟಿಯನ್ನು ಲಭ್ಯವಾಗಿಸಲು ಬ್ರಹ್ಮಾವರದ ಉನ್ನತಿ ಸಭಾಂಗಣದಲ್ಲಿ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಪಡಿತರ ಚೀಟಿಯನ್ನು ಸ್ಥಳದಲ್ಲೇ ಮುದ್ರಿಸಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಮೀನುಗಾರಿಕೆ ,ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

    ದನಿ ಇಲ್ಲದವರಿಗೆ ದನಿಯಾಗಿ ಅಧಿಕಾರಕ್ಕೆ ಬಂದ ಬಳಿಕ 18,300 ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದ್ದು, 820 ಕುಟುಂಬಕ್ಕೆ ಪೋಸ್ಟ್ ನಲ್ಲಿ ಕಾರ್ಡ್ ತಲುಪಿದೆ. ಹಲವು ಕಾರಣಗಳಿಂದ ಕಾರ್ಡ್ ದೊರಕದವರಿಗೆ ಸ್ಥಳದಲ್ಲೇ ಕಾರ್ಡ್ ವಿತರಿಸಲು ಪೂರಕವಾಗುವಂತೆ ಎರಡನೇ ಹಂತದಲ್ಲಿ ಮತ್ತೆ ಕಾರ್ಡ್ ವಿತರಿಸಲು ಕಾರ್ಯಕ್ರಮ ಆರಂಭಿಸಿದೆ. 2013ರ ಬಳಿಕದ ರೂ. 1,20,000 ದೊಳಗಿನ ಆದಾಯ ಪ್ರಮಾಣ ಪತ್ರದೊಂದಿಗೆ ಆಧಾರ ಕಾರ್ಡ್, ಸಾವಿರ ಚದರ ಅಡಿಯೊಳಗಿನ ಮನೆ ದಾಖಲೆ ನೀಡಿದರೆ ಸ್ಥಳದಲ್ಲೇ ಪಡಿತರ ಚೀಟಿ ವಿತರಿಸಲಾಗುವುದೆಂದು ಸಚಿವರು ಹೇಳಿದರು.

    ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಸಚಿವರು ಖುದ್ದು ಸ್ಥಳದಲ್ಲೇ ಉಪಸ್ಥಿತರಿದ್ದು, ಕಾರ್ಡ್ ವಿತರಣೆ ವ್ಯವಸ್ಥೆಯ ಉಸ್ತುವಾರಿ ವಹಿಸಿದರಲ್ಲದೆ, ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿದರು. ಅಪರಾಹ್ನ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದು ಫಲಾನುಭವಿಗಳಿಗೆ ಕಾರ್ಡ್ ವಿತರಿಸಲು ಸೂಚನೆ ನೀಡಿದರು.

    ಪಡಿತರ ಚೀಟಿ ಬಡವರ ಪಾಲಿನ ಭಾಗ್ಯದ ಚೀಟಿಯಾಗಿದ್ದು ಕೇವಲ ಆಹಾರವಲ್ಲದೆ ಇದರಿಂದ ವಾಜಪೇಯಿ ಆರೋಗ್ಯ ಶ್ರೀ, ವಿದ್ಯುತ್ ಸಂಪರ್ಕವು ದೊರೆಯಲಿದೆ ಎಂದರು. ಪಡಿತರ ಚೀಟಿ ತಿದ್ದುಪಡಿಯನ್ನು ಇಲ್ಲೇ ಮಾಡಲಾಗುವುದು ಎಂದ ಸಚಿವರು, ಇಂದು ಸಕಾರಣದಿಂದ ಕಾರ್ಡ್ ‘ರಿಜೆಕ್ಟ್’ ಆದರೆ ಅಧಿಕಾರಿಗಳು ಕೇಳಿದ ಮಾಹಿತಿಯೊಂದಿಗೆ ಮಾರ್ಚ್ 3ರಂದು ಬೋರ್ಡ್ ಹೈಸ್ಕೂಲ್‍ಗೆ ಬಂದರೆ ಕಾರ್ಡ್ ಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದೂ ಸಚಿವರು ಹೇಳಿದರು.

    ಹಕ್ಕುಪತ್ರ, ವಸತಿಯಂತಹ ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ಉಡುಪಿ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತರಲಾಗಿದ್ದು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆಹಾರ ಇಲಾಖೆಯ ಪಾರ್ವತಿಯವರ ಕರ್ತವ್ಯವನ್ನು ಶ್ಲಾಘಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply