DAKSHINA KANNADA
ಸುಳ್ಯ ಉಪನೊಂದಣಾಧಿಕಾರಿಯ ಲಂಚಾವತಾರ ಬಯಲು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಸುಳ್ಯ ಉಪನೊಂದಣಾಧಿಕಾರಿಯ ಲಂಚಾವತಾರ ಬಯಲು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮಂಗಳೂರು,ಜೂನ್ 8 : ಭ್ರಷ್ಟಾಚಾರ ದ ಉಗಮಸ್ಥಾನಗಳಲ್ಲಿ ಆರ್.ಟಿ.ಒ, ಮತ್ತು ಉಪನೊಂದಣಾ ಕಛೇರಿಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಈ ಕಛೇರಿಗಳಲ್ಲಿ ಭ್ರಷ್ಟಾಚಾರವನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ , ಲಂಚಾವತಾರ ಮಾತ್ರ ಇಲ್ಲಿಯದ್ದು ಜನ್ಮಸಿದ್ಧ ಹಕ್ಕು ಎನ್ನುವಂತಾಗಿದೆ.
ಉಪನದಣಾ ಕಛೇರಿಯ ಎಲ್ಲಾ ಕಡತ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮಾಡಲಾಗಿದೆಯಾದರೂ , ಅರ್ಜಿಯ ಕೊನೆಯಲ್ಲಿ ಅಧಿಕಾರಿಯ ಸಹಿಗಾಗಿ ಅಧಿಕಾರಿಯ ಮುಂದೆ ಬರಲೇ ಬೇಕಾದ ಅನಿವಾರ್ಯತೆಯನ್ನೂ ಸೃಷ್ಟಿಸಲಾಗಿದೆ.
ಇದೇ ಸಂದರ್ಭವನ್ನು ಬಕ ಪಕ್ಷಿಯಂತೆ ಕಾಯುವ ಅಧಿಕಾರಿಗಳು ನಿರ್ಧಿಷ್ಟ ಅರ್ಜಿ ಯಾವೆಲ್ಲಾ ಟೇಬಲ್ ಮುಖಾಂತರ ವಿಲೇವಾರಿಯಾಗಿದೆಯೋ, ಆ ಎಲ್ಲಾ ಟೇಬಲ್ ಗಳ ವಾರೀಸುದಾರರ ಫೀಸನ್ನು ಒಟ್ಟಿಗೆ ಸೇರಿಸಿ ಲಂಚ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ಇಂಥಹುದೇ ಒಂದು ಲಂಚ ಪಡೆಯುವ ಅಧಿಕಾರಿಯು ಇದೀಗ ಬಲೆಗೆ ಬಿದ್ದಿದ್ದಾನೆ.
ಸುಳ್ಯದ ಪ್ರಭಾರ ಉಪನೊಂದಣಾಧಿಕಾರಿಯಾಗಿರುವ ಈತ ಇಸಿ ತೆಗೆಯಲು, ಜಾಗದ ನೊಂದಣಿ ಕಛೇರಿಗೆ ಬರುವವರಿಂದ ಹತ್ತು ಸಾವಿರ, ಇಪ್ಪತ್ತು ಸಾವಿರ ಹೀಗೆ ಲಂಚಪಡೆದುಕೊಳ್ಳುವಾಗ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಸಾರ್ವಜನಿಕರಲ್ಲಿ ಲಂಚ ಪಡೆಯುವ ಸಂದರ್ಭದಲ್ಲಿ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರ ಪಾಲಿದೆ ಎಂದು ರಾಜಾರೋಷ ವಾಗಿ ಹೇಳುತ್ತಿರುವುದೂ ವಿಡಿಯೋದಲ್ಲಿ ದಾಖಲಾಗಿದೆ.
ಕೇಶವಮೂರ್ತಿ ಎನ್ನುವ ಈತ ಕಳೆದ ಒಂದು ವರ್ಷದಿಂದ ಸುಳ್ಯ ಪ್ರಭಾರ ಉಪನೊಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಈತನ ಕರ್ಮಕಾಂಡ ಇದೀಗ ಬಟಾಬಯಲಾಗಿದೆ.