Connect with us

    LATEST NEWS

    ಪತ್ರಕರ್ತ ಮಿಥುನ್ ಕೊಡೆತ್ತೂರ್‌ಗೆ ‘ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿ

    ಮಂಗಳೂರು ಜೂನ್ 25 : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ಹೊಸದಿಗಂತ ದಿನಪತ್ರಿಕೆಯ ಮೂಲ್ಕಿ ವರದಿಗಾರ ಮಿಥುನ ಕೊಡೆತ್ತೂರ್‌ ಆಯ್ಕೆಯಾಗಿದ್ದಾರೆ.


    ಹೊಸದಿಗಂತ ಪತ್ರಿಕೆಯಲ್ಲಿ 2023 ನವೆಂಬರ್‌ 7ರಂದು ಪ್ರಕಟವಾದ ಮಿಥುನ್‌ ಅವರ “‌ಬಾರಾಡಿಯಲ್ಲಿ ಬೆಳೆದಿದೆ 840 ತಳಿ ಭತ್ತʼ’ ಎಂಬ ವರದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 5,001 ರು., ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಮಂಗಳೂರು ಸುದ್ದಿವಿಭಾಗ ಮುಖ್ಯಸ್ಥ ಹರ್ಷ ಮತ್ತು ಆಳ್ವಾಸ್‌ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್‌ ಶೆಟ್ಟಿ ನೇತೃತ್ವದ ಸಮಿತಿಯು ಈ ವರದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಹೊಸದಿಗಂತ ದೈನಿಕದಲ್ಲಿ ಬಿಡಿ ಸುದ್ದಿ ಸಂಗ್ರಹಕಾರರಾಗಿ, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ವರದಿಗಾರರಾಗಿ, ಅನಂತ ಪ್ರಕಾಶ ಮಾಸಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುವ ಮಿಥುನ್‌, 2022ರ ಪಗೋ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ಅಧ್ಯಕ್ಷರು.  ಜೂ.27ರಂದು ಬೆಳಗ್ಗೆ 11 ಗಂಟೆಗೆ ಪತ್ರಿಕಾಭವನದಲ್ಲಿ ಮಂಗಳೂರು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರವಾಲ್‌ ಪ್ರಶಸ್ತಿ ಪ್ರದಾನ ಮಾಡುವರು. ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೊ, ಜಿಲ್ಲಾ ಆಯುಷ್‌ ಅಧಿಕಾರಿ ಇಕ್ಬಾಲ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸುವರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ.ಹರೀಶ್‌ ರೈ, ಪತ್ರಿಕಾಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್.‌ ಉಪಸ್ಥಿತರಿರುವರು.

    Share Information
    Advertisement
    Click to comment

    Leave a Reply

    Your email address will not be published. Required fields are marked *