LATEST NEWS
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯಲ್ಲಿ ರಾಜಕೀಯ ಬೇಡ….!!
ಮಂಗಳೂರು ಸೆಪ್ಟೆಂಬರ್ 07: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯ ರಾಜ್ಯಮಟ್ಟದ ಆಚರಣೆಗೆ ಇದೀಗ ಅಪಸ್ವರ ಕೇಳಿ ಬಂದಿದ್ದು, ಕೆಲವೆ ದಿನಗಳು ಇರುವಾಗ ಏಕಾಏಕಿ ಮಂಗಳೂರಿನಲ್ಲಿ ಆಯೋಜನೆ ಮಾಡಿರುವುದು ಗುರುಗಳ ಬಗೆಗಿನ ಗೌರವ ಭಾವವೋ ಅಥವಾ ರಾಜಕೀಯ ಸ್ವಾರ್ಥವೋ’ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಶ್ನಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾರಾಯಣ ಗುರುಗಳ ಅನುಯಾಯಿಗಳು ಬಹುಸಂಖ್ಯೆಯಲ್ಲಿದ್ದು, ಕರಾವಳಿಯೆಲ್ಲೆಡೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ, ಸಂಘಗಳು ನಿರ್ಮಾಣಗೊಂಡು ಗುರುಗಳನ್ನು ದೇವರಂತೆ ಪೂಜೆ ಮಾಡಿಕೊಂಡು ಬರಲಾಗಿದೆ. ಸೆ.10ರಂದು ಗುರು ಜಯಂತಿಯನ್ನು ಆಚರಿಸಲು ಎಲ್ಲ ಕಡೆಯೂ ಆಮಂತ್ರಣ ಪತ್ರಿಕೆಗಳ ಹಂಚಿಕೆಯೂ ಮುಗಿದಿದೆ. ಈ ಮಧ್ಯೆ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಗುರು ಜಯಂತಿ ಆಚರಣೆಯನ್ನು ಮಂಗಳೂರಿನ ಟಿ.ಎಂ.ಎ ಪೈ ಹಾಲ್‌ನಲ್ಲಿ ನಡೆಸಲು ಏಕಾಏಕಿ ತೀರ್ಮಾನಿಸಿರುವುದು ಎಷ್ಟು ಸರಿ. ಈ ಮೂಲಕ ಮತ್ತೊಮ್ಮೆ ನಾರಾಯಣ ಗುರುಗಳ ಹೆಸರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಅಷ್ಟಕ್ಕೂ ಮಂಗಳೂರಿನಲ್ಲಿ ಆಚರಣೆ ಮಾಡಬೇಕಂತಿದ್ದರೆ ಮೊದಲೇ ನಿರ್ಧಾರ ಮಾಡಬೇಕಿತ್ತು. ತಿಂಗಳ ಮೊದಲೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಜಿಲ್ಲೆಯ ವಿವಿಧ ಮಂದಿರಗಳಲ್ಲಿ ಪೂರಕವಾಗಿ ವ್ಯವಸ್ಥೆಗಳನ್ನು ಮಾಡಬಹುದಿತ್ತು. ಈ ಬಾರಿ ಗೌರವಪೂರ್ವಕವಾಗಿ ವಿಧಾನಸೌಧದಲ್ಲಿ ಆಚರಣೆ ಮಾಡಿ, ಮುಂದಿನ ವರ್ಷ ಮಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಿ. ಅದನ್ನು ಬಿಟ್ಟು ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಗುರುಗಳ ಅನುಯಾಯಿಗಳು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.