DAKSHINA KANNADA
ಬಾಯ್ತೆರೆದು ನಿಂತಿದೆ ಪಾಳುಬಿದ್ದ ಕೊಳವೆ ಬಾವಿ, ಸುಳ್ಯದ ಗುತ್ತಿಗಾರಿನಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿದೆ ಕೊಳವೆ ಬಾವಿ…..

ಬಾಯ್ತೆರೆದು ನಿಂತಿದೆ ಪಾಳುಬಿದ್ದ ಕೊಳವೆ ಬಾವಿ, ಸುಳ್ಯದ ಗುತ್ತಿಗಾರಿನಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿದೆ ಕೊಳವೆ ಬಾವಿ…..
ಸುಳ್ಯ, ಆಗಸ್ಟ್ 29: ಕೊಳವೆ ಬಾವಿ ತೆಗೆದು ನೀರು ಸಿಗದೇ ಇದ್ದರೆ, ಕೇಸಿಂಗ್ ಪೈಪ್ ತೆಗೆದರೆ ಅಂಥ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಸರಕಾರ ಕಟ್ಟುನಿಟ್ಟಾಗಿ ಆದೇಶವನ್ನು ಮಾಡಿದೆ.
ಆದರೆ ಸರಕಾರ, ಸ್ಥಳೀಯಾಡಳಿತವೇ ತನ್ನದೇ ಆದೇಶವನ್ನು ಉಲ್ಲಂಘಿಸಿದರೆ ಹೇಗೆ?

ಹೌದು ಇಂಥಹುದೊಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದಲ್ಲಿ ನಡೆದಿದೆ.
ಇಲ್ಲಿನ ರಸ್ತೆ ಬದಿಯಲ್ಲಿ ಗುತ್ತಿಗಾರು ಪಂಚಾಯತ್ ವತಿಯಿಂದ ಕುಡಿಯುವ ಕೊಳವೆಬಾವಿ ತೆಗೆಸಲಾಗಿತ್ತು. ಆದರೆ ನೀರು ಸಿಗದ ಹಿನ್ನೆಲೆಯಲ್ಲಿ ಕೊಳವೆಬಾವಿಯ ಕೇಸಿಂಗ್ ಪೈಪ್ ತೆಗೆಯಲಾಗಿದೆ.
ಮಳೆಗಾಲ ಇದಕ್ಕೆ ನೀರು ತುಂಬಿ ಕೊಳವೆಬಾವಿ ಗುಂಡಿಯಾಗಿದೆ.
ತಕ್ಷಣವೇ ಈ ಬಗ್ಗೆ ಸಾರ್ವಜನಿಕರು ಗುತ್ತಿಗಾರು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದರು.
ಆದರೆ ಆಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರೇ ಮಳೆಗಾಲದ ಹೊತ್ತಿಗೆ ಕೊಳವೆಬಾವಿ ಮುಚ್ಚಿದ್ದರು.
ಆದರೆ ಇದೀಗ ಮತ್ತೆ ಕೊಳವೆಬಾವಿ ಬಾಯಿ ತೆರೆದಿದೆ.
ಕಳೆದ ಜೂನ್ 26 ರಂದು ಗ್ರಾಮಪಂಚಾಯತ್ ಗಮನಕ್ಕೆ ಸ್ಥಳೀಯರು ಈ ವಿಚಾರವನ್ನು ತಂದಿದ್ದಾರೆ.
ಆದರೆ ಪಂಚಾಯತ್ ಈ ಬಗ್ಗೆ ತಕ್ಷಣ ಸ್ಪಂದಿಸದ ಕಾರಣ ಜೂನ್ 26 ರಂದು ಸ್ಥಳೀಯರೇ ಸೇರಿ ಕೊಳವೆ ಬಾವಿಗೆ ಮಣ್ಣು ಮುಚ್ಚಿ ಮಳೆಗಾಲದ ಅಪಾಯ ಸಂಭವಿಸುವುದನ್ನು ತಪ್ಪಿಸಿದ್ದಾರೆ.
ಆದರೆ ಇದೀಗ ಮಳೆ ನೀರು ಹರಿದು ಕೊಳವೆ ಬಾವಿ ಮತ್ತೆ ತೆರೆದುಕೊಂಡಿದೆ.
ಶಾಲೆಗೆ ರಜೆ ಇರುವ ಕಾರಣಕ್ಕೆ ಹೆಚ್ಚಿನ ಮಕ್ಕಳು ಆಟವಾಡುತ್ತಾ ರಸ್ತೆ ಬದಿ ಇರುವ ಇಂತಹ ಕೊಳವೆ ಬಾವಿ ಬಳಿ ಹೋದರೆ ಮುಂದಾಗುವ ಅಪಾಯಕ್ಕೆ ಯಾರು ಹೊಣೆ ಎಂದು ಸ್ಥಳೀಯ ನಿವಾಸಿ ಮಹೇಶ್ ಪುಚ್ಚಪ್ಪಾಡಿ ಆತಂಕ ವ್ಯಕ್ತಪಡಿಸುತ್ತಾರೆ.
ಕೊಳವೆ ಬಾವಿ ತೆರೆದಿರುವ ಬಗ್ಗೆ ಪಂಚಾಯತ್ ಗಮನಕ್ಕೆ ಸ್ಥಳೀಯರು ತಂದಿದ್ದರು. ಬಳಿಕ ಅದನ್ನು ಸ್ಥಳೀಯರೇ ಮುಚ್ಚಿದ್ದಾರೆ.
ಆದರೆ ಈಗ ಮತ್ತೆ ಕೊಳವೆ ಬಾವಿ ತೆಗೆದುಕೊಂಡಿರುವ ವಿಚಾರ ಗಮನಕ್ಕೆ ಬಂದಿಲ್ಲ.
ಕೊಳವೆ ಬಾವಿ ತೆರದಿದ್ದೇ ಆದಲ್ಲಿ ಅದನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಗುತ್ತಿಗಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ಪ್ರತಿಯೊಂದಕ್ಕೂ ಕಾನೂನು ಮಾತನಾಡುವ ಆಡಳಿತವು ಇಂತಹ ನಿರ್ಲಕ್ಷ್ಯದ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಅಪಾಯ ಸಂಭವಿಸಿದ ಬಳಿಕ ಕಾರ್ಯಾಚರಣೆ, ಭರವಸೆ ನೀಡುವುದಕ್ಕಿಂತ ಈಗಲೇ ಎಚ್ಚೆತ್ತುಕೊಂಡರೆ ಸಂಭವನೀಯ ಅಪಾಯ ತಪ್ಪಿಸಬಹುದಾಗಿದೆ.