LATEST NEWS
ಚೀನಾ – ಬೋಯಿಂಗ್ 737 ವಿಮಾನ ಪತನ – 130ಕ್ಕೂ ಅಧಿಕ ಮಂದಿ ಸಾವಿನ ಶಂಕೆ

ಬೀಜಿಂಗ್: ಚೀನಾದಲ್ಲಿ ಬೋಯಿಂಗ್ 737 ಪ್ರಯಾಣಿಕರ ವಿಮಾನ ಪತನವಾಗಿದ್ದು, 130 ಕ್ಕೂ ಅಧಿಕ ಮಂದಿ ಸಾವಿನ ಶಂಕೆ ವ್ಯಕ್ತಪಡಿಸಲಾಗಿದೆ.
ಅಂತರಾಷ್ಟ್ರೀಯ ಮಾಧ್ಯಮಗಳ ಮಾಹಿತಿ ಪ್ರಕಾರ ವಿಮಾನದಲ್ಲಿ ಸಿಬ್ಬಂದಿ ಸೇರಿ 133 ಜನ ಪ್ರಯಾಣಿಸುತ್ತಿದ್ದರು. ದಕ್ಷಿಣ ಚೀನಾದ ಗೌಂಗ್ಸ್‌ಕಿ ಪ್ರಾಂತ್ಯದಲ್ಲಿ ಈ ದುರಂತ ನಡೆದಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಪರಿಹಾರ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿದೆ ಎನ್ನಲಾಗಿದೆ. ಬೋಯಿಂಗ್ 737 ವಿಮಾನ ಇದಾಗಿದ್ದು, ಕುನ್‌ಮಿಂಗ್‌ನಿಂದ ಗೌಂಗುಗೆ ತೆರಳುತ್ತಿತ್ತು ಎಂದು ವರದಿಗಳು ತಿಳಿಸಿವೆ.

ಚೀನಾ ಈಸ್ಟರ್ನ್ ಏರ್ಲೈನ್ಸ್ಗೆ ಸೇರಿದ ಬೋಯಿಂಗ್ 737-800 ವಿಮಾನ MU5735 ವಿಮಾನ ಟೆಂಗ್ ಕೌಂಟಿಯ ವುಝೌ ನಗರದ ಬಳಿ ಅಪಘಾತಕ್ಕೀಡಾಗಿದ್ದು, ಗುಡ್ಡ ಪ್ರದೇಶದಿಂದ ಭರ್ಜರಿ ಹೊಗೆ ಏಳುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇದು ಸುಮಾರು ಆರು ವರ್ಷ ಹಳೆ ವಿಮಾನವಾಗಿದ್ದು, ಅಪಘಾತದಲ್ಲಿ ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.