KARNATAKA
ಅಂಕೋಲಾ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾಳ ಶವ ಪತ್ತೆ..!
ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಬಾಲಕಿ ಅವಂತಿಕಾಳ (6) ಮೃತದೇಹ ಪತ್ತೆಯಾಗಿದೆ.
ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮಣ್ಣಿನಡಿ ಬಿದ್ದು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಮತ್ತೋರ್ವ ಬಾಲಕಿ ಅವಂತಿಕಾ ಮೃತದೇಹ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ ತೀರದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಮೃತದೇಹವನ್ನು ಗೋಕರ್ಣದ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಇದೇ ದುರಂತದಲ್ಲಿ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಮತ್ತೊಂದು ಕಡೆ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಚರಣೆ ವೇಳೆ ಲಾರಿ ಒಂದರ ಜಿಪಿಎಸ್ ಲೋಕೇಷನ್ ಪತ್ತೆಯಾಗಿದೆ. ಜೋಯಿಡಾ ರಾಮನಗರದ ಜಗಳಪೆಟ್ದಿಂದ ಕಟ್ಟಿಗೆ ತುಂಬಿದ್ದ 12 ಚಕ್ರದ ಲಾರಿ ಕೇರಳಕ್ಕೆ ಪ್ರಯಾಣಿಸುತ್ತಿತ್ತು. ಶಿರೂರು ಲಕ್ಷ್ಮಣ ನಾಯ್ಕ್ರ ಹೋಟೆಲ್ನಲ್ಲಿ ಖಾಯಂ ಟೀ ಕುಡಿಯುತ್ತಿದ್ದ ಲಾರಿ ಚಾಲಕ ಅರ್ಜುನ್, ಮಂಗಳವಾರ ಬೆಳಗ್ಗೆ 4 ಗಂಟೆಗೆ ಗುಡ್ಡ ಕುಸಿತದ ಸ್ಥಳದಲ್ಲಿಯೇ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.ಲಾರಿ ಸಮೇತ ಅರ್ಜುನ್ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಷಯ ತಿಳಿದು ಅರ್ಜುನ್ ಕುಟುಂಬಸ್ಥರು ಕೂಡ ಸ್ಥಳಕ್ಕಾಗಮಿಸಿದ್ದಾರೆ. ತ್ವರಿತ ಕಾರ್ಯಾಚರಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಅರ್ಜುನ್ ಸಹೋದರ ಅಭಿಜಿತ್ ಮನವಿ ಮಾಡಿದ್ದಾರೆ.
update..
ಗ್ಯಾಸ್ ಟ್ಯಾಂಕರ್ ಚಾಲಕನ ಶವ ಪತ್ತೆ..
ಗಂಗಾವಳಿ ನದಿಯಲ್ಲಿ ಇಬ್ಬರು ಲಾರಿ ಚಾಲಕರ ಮೃತದೇಹ ಸಿಕ್ಕಿದೆ. ಅದರಲ್ಲೊಬ್ಬರನ್ನು ಗ್ಯಾಸ್ ಟ್ಯಾಂಕರ್ ಚಾಲಕ ಮುರುಗನ್ ಮೃತದೇಹ ಎಂದು ಗುರುತಿಸಲಾಗಿದೆ. ಶಿರೂರು ಗುಡ್ಡ ಕುಸಿತದ ವೇಳೆ ಲಾರಿ ಸಮೇತ 45 ವರ್ಷದ ಮುರುಗನ್ ನೀರಿಗೆ ಬಿದ್ದಿದ್ದಾರೆ ಎಂದು ಅಂದಾಜಿಸಲಾಗಿದೆ.
ಮತ್ತೋರ್ವ ವ್ಯಕ್ತಿಯ ಮೃತದೇಹ ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯಲ್ಲಿ ಸಿಕ್ಕಿದೆ. ಇಲ್ಲಿಯವರೆಗೆ 7 ಮೃತದೇಹ ಸಿಕ್ಕಿದೆ. ಸದ್ಯ ನದಿಯಲ್ಲಿ ಹುಡುಕಾಟದ ಕಾರ್ಯಾಚರಣೆ ಮುಂದುವರೆದಿದೆ.