Connect with us

UDUPI

ರಕ್ತದಾನಿಗಳ ದಿನಾಚರಣೆಯಿಂದ ಹೊಸ ರಕ್ತದಾನಿಗಳಿಗೆ ಪ್ರೇರಣೆ: ಡಿ.ಹೆಚ್.ಓ ಡಾ. ನಾಗಭೂಷಣ ಉಡುಪ

ಉಡುಪಿ, ಜೂನ್ 14 : ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಸಾಕಷ್ಟಿದ್ದು, ತುರ್ತು ಸಂದರ್ಭಗಳಲ್ಲಿ ಇವರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡುತ್ತಿದ್ದಾರೆ. ರಕ್ತದಾನಿಗಳ ದಿನಾಚರಣೆಯು ಹೊಸ ರಕ್ತದಾನಿಗಳಿಗೆ ಪ್ರೇರಣೆ ನೀಡಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು.

ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಭಾವಪ್ರಕಾಶ ಆಡಿಟೋರಿಯಂನಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಲಯನ್ಸ್ ಕ್ಲಬ್ ಉಡುಪಿ ಲಕ್ಷö್ಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ರೆಡ್‌ಕ್ರಾಸ್ ಘಟಕ ಮತ್ತು ಎನ್.ಎಸ್.ಎಸ್ ಘಟಕ ಉದ್ಯಾವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಧ್ಯೇಯವಾಕ್ಯವಾದ ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚಾಗಿ ಹಂಚಿಕೊಳ್ಳಿ ಎಂಬ ವಾಕ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು, ರಕ್ತದಾನ ಮಾಡುವುದರಿಂದ ಈ ಕಾರ್ಯಕ್ರಮವು ಸಾರ್ಥಕತೆ ಪಡೆಯಲಿದೆ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ರಕ್ತದ ಕೊರತೆಯಿಂದ ಹಲವಾರು ಮನುಷ್ಯ ಜೀವಗಳು ಸಾವನ್ನಪ್ಪುತ್ತಿದ್ದು, ಯುವಜನತೆ ರಕ್ತದ ಅವಶ್ಯಕತೆಯನ್ನು ಮನಗಂಡು ರಕ್ತದಾನ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಸಂಗ್ರಹವಾದ ರಕ್ತವನ್ನು ಜಾತಿ, ಮತ, ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ವಿವಿಧ ಜಿಲ್ಲೆಗಳ ಆಸ್ಪತ್ರೆಗಳಿಗೂ ನೀಡುತ್ತಿದ್ದು, ಒಬ್ಬ ವ್ಯಕ್ತಿಯು ರಕ್ತವನ್ನು ದಾನ ಮಾಡುವುದರಿಂದ ಕನಿಷ್ಠ ನಾಲ್ಕು ಜನರ ಜೀವ ಉಳಿಸಬಹುದಾಗಿದೆ ಎಂದರು.

ಯುವಜನರು ಹೆಚ್ಚಾಗಿ ರಕ್ತದಾನದಲ್ಲಿ ತೊಡಗಿಸಿಕೊಂಡು ತಾವು ರಕ್ತದಾನ ಮಾಡುವಂತೆ, ಇತರರಿಗೂ ಜಾಗೃತಿ ಮೂಡಿಸಿ ರಕ್ತದಾನ ಮಾಡಲು ಪ್ರೇರೇಪಿಸುವಂತೆ ತಿಳಿಸಿದ ಅವರು, ಮಹಿಳೆಯರು ಕೂಡ ಹೆಚ್ಚಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ಶಾಲಾ-ಕಾಲೇಜುಗಳ ರಜೆಯ ಕಾರಣ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದ್ದು, ಅಂತಹ ಸಮಯದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರಗಳಿಗೆ ಹಾಗೂ ರಕ್ತದಾನ ಶಿಬಿರಗಳಿಗೆ ತೆರಳಿ ರಕ್ತದಾನ ಮಾಡುವಂತೆ ತಿಳಿಸಿದರು.

ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಸಹಾಯಕ ಪ್ರಾಧ್ಯಾಪಕ ಡಾ. ಸಂದೇಶ್ ಕುಮಾರ್ ಶೆಟ್ಟಿ, ಸುಹಾಸ್ ಹೆಗಡೆ, ರಾಕೇಶ್ ಸುವರ್ಣ, ಅನುರಾಧ ಉದ್ಯಾವರ ಹಾಗೂ ಆಶಾ ಶಿವರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ರಕ್ತದಾನಿಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *