LATEST NEWS
ಭೋಪಾಲ್ – ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ – 11 ಮಂದಿ ಬಲಿ
ಭೋಪಾಲ್ ಫೆಬ್ರವರಿ 06: ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟಕ್ಕೆ 11 ಮಂದಿ ಸಾವನಪ್ಪಿ 60ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ನಡೆದಿದೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕಾರ್ಖಾನೆಯಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಇಂದೋರ್ ಮತ್ತು ಭೋಪಾಲ್‌ನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪಟಾಕಿ ಕಾರ್ಖಾನೆಯ ಸ್ಫೋಟದ ತೀವ್ರತೆಗೆ ಸುಮಾರು ಅರವತ್ತು ಮನೆಗಳು ನಾಶವಾಗಿವೆ. ಕಾರ್ಖಾನೆಯಲ್ಲಿ ನಿರಂತರ ಸ್ಫೋಟಗಳು ಸಂಭವಿಸಿದ ಕಾರಣ 100ಕ್ಕೂ ಹೆಚ್ಚು ಮನೆಗಳಲ್ಲಿದ್ದ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಘಟನೆಯಲ್ಲಿ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ವರದಿಯಾಗಿದೆ ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಸಂಬಂಧಿಕರು ಘಟನಾ ಸ್ಥಳದತ್ತ ದೌಡಾಯಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಅಧಿಕಾರಿಗಳೊಂದಿಗೆ ಮಾತನಾಡಿ ಘಟನೆ ಸಂಬಂಧ ಮಾಹಿತಿ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.