LATEST NEWS
ಮಂಗಳೂರು – ಬಾವಿಗೆ ಬಿದ್ದಿದ್ದ ಅಪರೂಪದ ಕರಿ ಚಿರತೆ ರಕ್ಷಣೆ
ಮಂಗಳೂರು ಮಾರ್ಚ್ 31: ಅತೀ ಅಪರೂಪದ ಕರಿ ಚಿರತೆಯೊಂದು ಬಾವಿಯೊಂದಕ್ಕೆ ಬಿದ್ದ ಘಟನೆ ಎಡಪದವಿನ ಗೊಸ್ಪೆಲ್ ಸನಿಲ ಎಂಬಲ್ಲಿ ಭಾನುವಾರ ನಡೆದಿದೆ.
ಇಲ್ಲಿನ ಶಕುಂತಳಾ ಆಚಾರ್ಯ ಅವರ ಮನೆಯ ಬಾವಿಯಿಂದ ನೀರು ತೆಗೆಯಲು ಹೋದ ವೇಳೆ ಚಿರತೆ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಮೇಲೆತ್ತಲು ಬೆಳಗ್ಗಿನಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಚಿರತೆಯನ್ನು ಸೆರೆ ಹಿಡಿದರು. ಕಾರ್ಯಾಚರಣೆಗಾಗಿ ಬಾವಿಯ ಸುತ್ತ ಬಲೆ ಹಾಕಿ ಬಾವಿಗೆ ಏಣಿ ಇಳಿಸಲಾಗಿತ್ತು. ಬಾವಿಯ ದಂಡೆಯ ಸಮೀಪ ಚಿರತೆ ಸೆರೆಗೆ ಬೋನು ಇಡಲಾಗಿತ್ತು.
ಎಡಪದವು ಪರಿಸರದ ಬೋರುಗುಡ್ಡೆ ಎಂಬಲ್ಲಿ ಕೆಲವು ದಿನಗಳಿಂದ ಚಿರತೆಯ ಉಪಟಳ ಹೆಚ್ಚಾಗಿತ್ತು. ಹಲವು ಮನೆಗಳ ಸಾಕು ನಾಯಿಗಳು ಹಾಗೂ ದನಗಳು ಚಿರತೆಗೆ ಆಹಾರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಾವಿಗೆ ಬಿದ್ದ ಚಿರತೆಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು.