LATEST NEWS
ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಅವರ ಪಕ್ಷದವರೇ ಕೊಲೆ ಮಾಡುತ್ತಿದ್ದಾರೆ – ವಿನಯ್ ಕುಮಾರ್ ಸೊರಕೆ

ಉಡುಪಿ ಜೂನ್ 12: ಉಡುಪಿಯಲ್ಲಿ ಬಿಜೆಪಿ ಅಧಿಕಾರಿಕ್ಕೆ ಬಂದ ಮೇಲೆ ವಿಚ್ಚಿದ್ರಕಾರಿ ದುರ್ಘಟನೆಗಳು ಹೆಚ್ಚಾಗಿದ್ದು, ಬಿಜೆಪಿ ಕಾರ್ಯಕರ್ತರನ್ನು ಅವರ ಪಕ್ಷದವರೇ ಕೊಲೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಪಂಚಾಯತ್ ನಿಂದ ಆಗುತ್ತಿದ್ದ ತೊಂದರೆಗಳ ಬಗ್ಗೆ ಟೀಕಿಸಿದ್ದಕ್ಕೆ ಗ್ರಾಮಸ್ಥನನ್ನು ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ಕು ಮಂದಿ ಬಂಧನವಾಗಿದೆ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಮೇಲೆ ಬಿಜೆಪಿ ಸಾಕಷ್ಟು ಟೀಕೆ ಮಾಡಿತ್ತು, ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರು ಕೊಲೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು, ಕಾಂಗ್ರೆಸ್ ಕೊಲೆಗಳಿಗೆ ಬೆಂಬಲ ಕೊಡುತ್ತಾರೆ ಎಂದು ಪ್ರಚಾರ ಮಾಡಿದರು. ಆದರೆ ಈ ಉಡುಪಿ ಜಿಲ್ಲೆಯ ನಡೆದ ಮೂರು ಘಟನೆಯನ್ನು ಮೆಲುಕು ಹಾಕಬೇಕು. ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಕೋಟ ಅವಳಿ ಕೊಲೆ ಪ್ರಕರಣ , ಎಡಮೊಗೆ ಕೊಲೆ ಪ್ರಕರಣ, ಕೊಲೆ ಮಾಡಿದ ಎಲ್ಲಾ ಆರೋಪಿಗಳು ಬಿಜೆಪಿಗೆ ಸೇರಿದ್ದಾರೆ. ಎಡಮೊಗೆ ಪ್ರಕರಣದಲ್ಲಿ ಬಿಜೆಪಿ ಪಂಚಾಯತ್ ಅಧ್ಯಕ್ಷನೇ ಮೊದಲ ಆರೋಪಿಯಾಗಿದ್ದಾನೆ.

ದೇಶದಲ್ಲಿ ಸಣ್ಣಪುಟ್ಟ ಘಟನೆಯಾದರೂ ಸಂಸದೆ ಶೋಭಾ ಕರಂದ್ಲಾಜೆ ದೊಡ್ಡದಾಗಿ ಬಿಂಬಿಸುತ್ತಾರೆ. ಅದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಾರೆ, ಆದರೆ ಅವರದೇ ಪಕ್ಷದ ಕಾರ್ಯಕರ್ತ ಕೊಲೆಯಾದರೂ ಶೋಭಾ- ಬಿ.ವೈ ರಾಘವೇಂದ್ರ ಸಂತ್ರಸ್ತರ ಮನೆಗೆ ಯಾಕೆ ಭೇಟಿ ಕೊಟ್ಟಿಲ್ಲ ಎಂದು ವಿನಯ್ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.
ಎಡಮೊಗೆ ಕೊಲೆ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವಿಲ್ಲದ ಆರೋಪಿಗಳಿಗೆ ಶಿಕ್ಷೆಯಾಗಬೇಕಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು, ಯಾವುದೇ ಕಾರಣಕ್ಕೂ ಅಧ್ಯಕ್ಷ ಪಂಚಾಯತ್ ಕಚೇರಿಯಲ್ಲಿ ಕುಳಿತುಕೊಳ್ಳಬಾರದು, ಕೊಲೆಗೈದ ಆತನನ್ನು ಶಾಶ್ವತವಾಗಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.