Connect with us

LATEST NEWS

ಪ್ರೆಸ್ ಮೀಟ್ ಮಾಡಿದ ಕಾಂಗ್ರೇಸ್ ಮುಖಂಡರು ಯಾರೂ ಸಹ ಅಲ್ಲಿ ಇರಲೇ ಇಲ್ಲ…ಆದರೂ ಬಾಯಿಗೆ ಬಂದ ಹಾಗೆ ಹೇಳಿಕೆಯನ್ನು ಕೊಡುತ್ತಿದ್ದಾರೆ

ಮಂಗಳೂರು ಮಾರ್ಚ್ 03: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶಾಸಕರ ಸಹಿತ ಬಿಜೆಪಿ ಪ್ರಮುಖರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ರಾಜ್ಯಕ್ಕೆ ಒಕ್ಕರಿಸಿರುವ ಹೊಸ ಚಾಳಿ. ಯಾವುದೇ ಗೊಂದಲಗಳಿಲ್ಲದೇ ನಡೆಯುತ್ತಿರುವಂತಹ ಕಾರ್ಯಕ್ರಮಗಳಲ್ಲಿ ಗೊಂದಲ ಸೃಷ್ಟಿಸಿ, ಗಲಭೆಯಾಗುವಂತೆ ಮಾಡಿ ಅದನ್ನು ಬಿಜೆಪಿಯವರ ತಲೆಗೆ ಕಟ್ಟುವುದು ಕಾಂಗ್ರೆಸ್ಸಿನ ಎಂದಿನ ಹಣೆಬರಹ. ಇದೀಗ ಅದರ ಮುಂದುವರಿದ ಭಾಗವಾಗಿ ಶಾಸಕ ವೇದವ್ಯಾಸ ಕಾಮತ್ ರವರು ಕಾಂಗ್ರೆಸ್ಸಿಗನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ರಾಜ್ ಗೋಪಾಲ್ ರೈ ರವರು ಆಕ್ರೋಶ ವ್ಯಕ್ತಪಡಿಸಿದರು.


ಶಕ್ತಿನಗರದ ಕೃಷ್ಣಮಂದಿರದಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವಕ್ಕೆ ಶಾಸಕರು ಬಂದ ಸಂದರ್ಭದಲ್ಲೇ ಒಂದಷ್ಟು ಸಹಜ ಹಾಗೂ ತಮಾಷೆಯ ಮಾತುಕತೆಗಳು ಆಗಿದ್ದಾವೆ. ಶಾಸಕರು ಅದಕ್ಕೆ ನಯವಾಗಿಯೇ ಉತ್ತರಿಸಿ ತಮಗೆ ದೇವಸ್ಥಾನದಲ್ಲಿ ನೀಡಿದ್ದ ಪ್ರಸಾದವನ್ನು ಅವರಿಗೆ ಹಂಚಿ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಕೆಲವೊಂದು ಕಾಂಗ್ರೆಸ್ಸಿಗರು “ಶಾಸಕರನ್ನು ಬಿಡಬಾರದು, ಮುತ್ತಿಗೆ ಹಾಕಬೇಕು, ಎಂದು ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ದೇವಸ್ಥಾನಗಳಿಗೆ ಕಾಂಗ್ರೆಸ್ ಸರ್ಕಾರದಿಂದ ನಾಲ್ಕು ಕಾಸು ಅನುದಾನ ತರುವ ಯೋಗ್ಯತೆಯೂ ಇಲ್ಲ. ಹಿಂದೂಗಳ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಲೂಬಾರದು. ಇದು ಕಾಂಗ್ರೆಸ್ಸಿಗರ ಉದ್ದೇಶ..

ನಂತರ ಶಾಸಕರ ಜೊತೆಗಿದ್ದ ಪರಿಶಿಷ್ಟ ಜಾತಿಯ ಬಂಧುವೊಬ್ಬರ ಮೇಲೆ ಹಲ್ಲೆ ನಡೆಸಿದರು. ನೊಂದ ವ್ಯಕ್ತಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದಾಗ ವಿಚಲಿತರಾದ ಕಾಂಗ್ರೆಸ್ಸಿಗರು, “ನಮ್ಮ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಾದರೆ ತೊಂದರೆಯಾಗುತ್ತದೆ” ಎಂಬ ಭಯದಿಂದ ಕಾಂಗ್ರೆಸ್ಸಿಗನೊಬ್ಬ ತನ್ನ ಶರ್ಟ್ ತಾನೇ ಹರಿದುಕೊಂಡು, ಆಸ್ಪತ್ರೆಗೆ ಹೋಗಿ ಮಲಗಿ ಶಾಸಕರ ವಿರುದ್ಧವೇ ದೂರು ನೀಡಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹೇಗಾದರೂ ಮಾಡಿ ಕಾಂಪ್ರಮೈಸ್ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಮಗೆ ಸಮಸ್ಯೆಯಾಗುತ್ತದೆ ಎಂಬುದು ಕಾಂಗ್ರೆಸ್ಸಿಗರ ಉದ್ದೇಶವಾಗಿದೆ ಅಷ್ಟೇ
ಇಷ್ಟು ವರ್ಷದಲ್ಲಿ ಶಾಸಕರು ಯಾರೊಬ್ಬರ ಮೇಲೂ ಹಲ್ಲೆ ನಡೆಸಿದ ಉದಾಹರಣೆ ಇಲ್ಲವೇ ಇಲ್ಲ. ಹಾಗೊಂದು ವೇಳೆ ಇದ್ದರೆ ದಾಖಲೆ ಕೊಡಲಿ. ಶಾಸಕರ ವಿರುದ್ಧ ಇವರು ಮಾಡುತ್ತಿರುವ ಮಸಲತ್ತುಗಳು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ನಡೆದಿದೆ.

ಇವತ್ತು ಪ್ರೆಸ್ ಮೀಟ್ ಮಾಡಿದ ಪದ್ಮರಾಜ್, ಹರೀಶ್ ಕುಮಾರ್, ಪ್ರಕಾಶ್ ಸಾಲ್ಯಾನ್ ಯಾರೂ ಸಹ ಅಲ್ಲಿ ಇರಲೇ ಇಲ್ಲ. ಆದರೂ ಸಹ ಇವರೆಲ್ಲರೂ ಬಾಯಿಗೆ ಬಂದ ಹಾಗೆ ಹೇಳಿಕೆಯನ್ನು ಕೊಡುತ್ತಿದ್ದಾರೆ. ಶಾಸಕರು ತಮ್ಮ ಭಾಷಣದಲ್ಲಿ ಪ್ರಚೋದನೆ ಮಾಡಿದರು ಎಂದು ಒಬ್ಬರು ಹೇಳಿದರೆ, ಹಲ್ಲೆಗೊಳಗಾದ ಪರಿಶಿಷ್ಟ ಸಮುದಾಯದ ವ್ಯಕ್ತಿ ಅಲ್ಲಿ ಇರಲೇ ಇಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ. ಅವರ ಹೇಳಿಕೆಗಳಲ್ಲೇ ಗೊಂದಲ ಇಟ್ಟುಕೊಂಡು ಪ್ರೆಸ್ ಮೀಟ್ ಮಾಡುತ್ತಾರೆಂದರೆ ಇವರಿಗೆ ಮಾನ ಮರ್ಯಾದೆ ಇದೆಯಾ.?

ಯಾರೋ ಕಾಂಗ್ರೆಸ್ ನಾಯಕರು ಪ್ರೆಸ್ ಮೀಟ್ ನಲ್ಲಿ ಕೂತು ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳುವ ಬದಲು ದೂರು ಕೊಟ್ಟ ವ್ಯಕ್ತಿಯೇ, ನಾವು ನೀವೆಲ್ಲರೂ ನಂಬುವ ಕೊರಗಜ್ಜನ ಸನ್ನಿಧಿಗೆ, ಕದ್ರಿ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಲು ಸಿದ್ಧರಿದ್ದಾರಾ? ಆತ್ಮ ಗೌರವ ಇದ್ದರೆ, ಸ್ವಾಭಿಮಾನ ಇದ್ದರೆ, ದೈವ ದೇವರುಗಳ ಮೇಲೆ ನಂಬಿಕೆಯಿದ್ದರೆ ಸತ್ಯ ಪ್ರಮಾಣಕ್ಕೆ ಬರಲಿ. ನಮ್ಮ ಶಾಸಕರು ಯಾವುದೇ ಆಣೆ ಪ್ರಮಾಣಕ್ಕೆ ಸಿದ್ದವಾಗಿದ್ದಾರೆ.

ಕಾಂಗ್ರೆಸ್ಸಿಗರು ಒಂದು ಕಡೆ ಅಂಬೇಡ್ಕರ್, ಇನ್ನೊಂದು ಕಡೆ ಸಂವಿಧಾನ, ಅಂತ ಹೇಳಿ ಮತ್ತೊಂದು ಕಡೆ ಸಂವಿಧಾನಕ್ಕೆ ವಿರುದ್ಧವಾಗಿ ಪರಿಶಿಷ್ಟ ಸಮುದಾಯದ ಬಂಧುವೊಬ್ಬರ ಮೇಲೆ ಹಲ್ಲೆ ನಡೆಸುತ್ತಾರೆ. ಶಾಸಕರ ಜೊತೆ ಮಾತುಕತೆ ಎಲ್ಲವೂ ಮುಗಿದ ನಂತರ ಎಸ್ಸಿ ಸಮುದಾಯದ ಯುವಕನಿಗೆ ಯಾಕೆ ಹಲ್ಲೆ ನಡೆಸಬೇಕಿತ್ತು? ಇತ್ತೀಚೆಗೆ ಬ್ಯಾಂಕ್ ಒಂದರ ಚುನಾವಣೆಯಲ್ಲಿ ಹೀನಾಯವಾಗಿ ಸೋತ ದಿನದಿಂದಲೇ ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ನೀಡುತ್ತೇವೆ, ತಕ್ಕ ಉತ್ತರ ನೀಡುತ್ತೇವೆ, ಬುದ್ಧಿ ಕಲಿಸುತ್ತೇವೆ ಎಂದು ಹಾದಿ ಬೀದಿಯಲ್ಲಿ ಇದೇ ಕಾಂಗ್ರೆಸ್ ನಾಯಕರು ಹೇಳಿಕೊಂಡು ಬರುತ್ತಿದ್ದರು. ಈಗ ಈ ಪ್ರಕರಣವನ್ನು ನೋಡಿದರೆ ಇದೆಲ್ಲವೂ ಅವರ ಷಡ್ಯಂತ್ರದ ಭಾಗವೆಂದು ಮನದಟ್ಟಾಗುತ್ತಿದೆ. ಇದೇ ವ್ಯಕ್ತಿ 2018 ರ ಶಾಸಕರ ಮೊದಲ ಚುನಾವಣೆಯಲ್ಲೂ ಇಂತಹದೇ ನಾಟಕ ಮಾಡಿದ್ದ. ಅವನಿಗೆ ಅದೇ ಒಂದು ಉದ್ಯೋಗ.

ನಮ್ಮ ಪ್ರಶ್ನೆ ಇಷ್ಟೇ, ವಿನಾಕಾರಣ ನಮ್ಮ ಶಾಸಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದು ಏಕೆ? ಇವತ್ತು ಇವರು ಕ್ಷೇತ್ರದ ಒಬ್ಬ ಜನಪ್ರಿಯ ಶಾಸಕರ ಮೇಲೆಯೇ ಸುಳ್ಳು ಕೇಸ್ ದಾಖಲಿಸುತ್ತಾರೆಂದರೆ, ಇನ್ನು ಸಾಮಾನ್ಯ ಜನರ ಗತಿ ಏನು? ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಾನೂನನ್ನು ಹೇಗೆ ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಈ ಹಿಂದೆ ನಮ್ಮ ಸರ್ಕಾರವೂ ಅಧಿಕಾರದಲ್ಲಿ ಇತ್ತು. ಆದರೆ ವಿರೋಧ ಪಕ್ಷಗಳ ಯಾವ ನಾಯಕರ ಮೇಲೂ ಇಂತಹ ಕುತಂತ್ರ ಬುದ್ಧಿ ತೋರಿಸಿಲ್ಲ. ಆದರೂ ಕಾಂಗ್ರೆಸ್ಸಿನ ಇಂತಹ ಕುತಂತ್ರಗಳನ್ನು ನಾವು ಕಾನೂನು ಮೂಲಕವೇ ಎದುರಿಸುತ್ತೇವೆ.
ಅಂತಿಮವಾಗಿ ಸುಸೂತ್ರವಾಗಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಜನರನ್ನು ಶಾಸಕರ ವಿರುದ್ಧ ಎತ್ತಿ ಕಟ್ಟಲು ನೋಡಿದ್ದು ಯಾರು? ಜನರಿಗೆ ತಪ್ಪು ಸಂದೇಶ ನೀಡಿ ಗೊಂದಲ ಸೃಷ್ಟಿಸಿದ್ದು ಯಾರು.? ಈ ಬಗ್ಗೆ ಸೂಕ್ತ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಮತ್ತು ಪರಿಶಿಷ್ಟ ಸಮುದಾಯದ ಬಂಧುವೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಆಗ್ರಹಿಸುತ್ತೇವೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *