LATEST NEWS
ಪರಿಷತ್ತಿಗೆ ಬಿಜೆಪಿ ಲಿಸ್ಟ್ ; ಹಳ್ಳಿಹಕ್ಕಿಗೆ ಕೊಕ್, ಎಂಟಿಬಿ, ಶಂಕರ್ ಗೆ ಮತ್ತೆ ಮಣೆ, ಪ್ರತಾಪಸಿಂಹ ನಾಯಕ್, ವಲ್ಯಾಪುರೆ ಅಚ್ಚರಿ ಆಯ್ಕೆ
ಮತ್ತೆ ನಿಷ್ಠಾವಂತ ಕಾರ್ಯಕರ್ತನಿಗೆ ಮಣೆ ಹಾಕಿದ ಹೈಕಮಾಂಡ್
ಬೆಂಗಳೂರು, ಜೂನ್ 18 :ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಹೈಕಮಾಂಡ್ ನಾಲ್ವರ ಹೆಸರು ಪ್ರಕಟಿಸಿದ್ದು ಪ್ರಬಲ ಆಕಾಂಕ್ಷಿಗಳಾಗಿದ್ದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಗೆ ಟಿಕೆಟ್ ಸಿಕ್ಕಿದೆ. ಮತ್ತೊಬ್ಬ ಆಕಾಂಕ್ಷಿ ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಟಿಕೆಟ್ ವಂಚಿತರಾಗಿದ್ದಾರೆ. ಬದಲಿಗೆ, ದಕ್ಷಿಣ ಕನ್ನಡ ಮೂಲದ ಪ್ರತಾಪಸಿಂಹ ನಾಯಕ್ ಮತ್ತು ಗುಲ್ಬರ್ಗ ಮೂಲದ ಸುನೀಲ್ ವಲ್ಯಾಪುರೆ ಅವರನ್ನು ಪರಿಷತ್ ಚುನಾವಣೆಯ ಟಿಕೆಟ್ ನೀಡಲಾಗಿದೆ.
ರಾಜ್ಯಸಭೆಗೆ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಪರಿಗಣಿಸಿದ್ದ ಬಿಜೆಪಿ ಹೈಕಮಾಂಡ್ ಈ ಬಾರಿಯೂ ಒಬ್ಬರು ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರಾಗಿರುವ ಪ್ರತಾಪಸಿಂಹ ನಾಯಕ್, ಈ ಹಿಂದೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಳಿಕ ಮೂಲೆಗೆ ಸೇರಿದ್ದರು. ಈಗ ನಾಯಕ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಮೂಲಕ ಮತ್ತೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಹೊಸ ಸಂದೇಶ ರವಾನಿಸಿದೆ.
ವಿಶೇಷ ಅಂದರೆ, ನಾಯಕ್ ಹೆಸರು ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲೂ ಕಾಣಿಸಿರಲಿಲ್ಲ. ಕಳೆದ ಬಾರಿ ಬಿಜೆಪಿ ಸರಕಾರ ರಚನೆಗೆ ಕಾರಣರಾಗಿದ್ದ ಆರ್.ಶಂಕರ್, ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಅವರು ಮಾತ್ರ ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹೇರಿದ್ದರು. ಈಗ ವಿಶ್ವನಾಥ್ ಬಿಟ್ಟು ಉಳಿದಿಬ್ಬರಿಗೆ ಟಿಕೆಟ್ ನೀಡುವ ಮೂಲಕ ಇಬ್ಬರು ಕುರುಬ ಸಮುದಾಯಕ್ಕೆ ಹಂಚಿಕೆ ಮಾಡಿದ್ದಲ್ಲದೆ ಜಾತಿ ಸಮೀಕರಣವನ್ನೂ ಮಾಡಲಾಗಿದೆ. ಜೊತೆಗೆ, ಗುಲ್ಬರ್ಗದಲ್ಲಿ ಎರಡು ಬಾರಿ ಶಾಸಕರಾಗಿದ್ದ ಸುನೀಲ್ ವಲ್ಯಾಪುರೆಗೂ ಟಿಕೆಟ್ ನೀಡಲಾಗಿದೆ. ಪ್ರತಾಪಸಿಂಹ ನಾಯಕ್ ಹೆಸರು ಮಾತ್ರ ಅಚ್ಚರಿಯ ಆಯ್ಕೆ. ನಿರ್ಮಲ್ ಕುಮಾರ್ ಸುರಾನ, ಸಿ.ಪಿ ಯೋಗೀಶ್ವರ್ ಪ್ರಬಲ ಲಾಬಿ ನಡೆಸಿದ್ದಾಗ್ಯೂ ಹೈಕಮಾಂಡ್ ನಾಯಕ್ ಅವರನ್ನು ಪರಿಗಣಿಸಿದ್ದು ವಿಶೇಷ.
ಇಂದು (ಜೂನ್ 18) ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್ ಮತ್ತು ನಸೀರ್ ಅಹ್ಮದ್ ಹೆಸರನ್ನು ಅಂತಿಮಗೊಳಿಸಿದೆ. ಜೆಡಿಎಸ್ ಒಂದು ಸ್ಥಾನ ಗೆಲ್ಲಬಹುದಾಗಿದ್ದು ಅಭ್ಯರ್ಥಿ ಹೆಸರು ಘೋಷಿಸಿಲ್ಲ. ಗೋವಿಂದರಾಜು ಹೆಸರು ಚಾಲ್ತಿಯಲ್ಲಿದೆ. ಹೆಚ್ಚುವರಿ ಅಭ್ಯರ್ಥಿ ಹಾಕದೇ ಇದ್ದರೆ ಪರಿಷತ್ ಚುನಾವಣೆಯೂ ಅವಿರೋಧ ನೆಲೆಯಲ್ಲಿ ಆಯ್ಕೆ ಆಗುವ ಸಾಧ್ಯತೆ ತಳ್ಳಿಹಾಗಲಾಗದು. ಜೂನ್ 29ರಂದು ಚುನಾವಣೆ ನಡೆಯಲಿದೆ.