DAKSHINA KANNADA
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ, ಆರೋಪಿಗಳ ಪಿನ್ ಟು ಪಿನ್ ಡಿಟೇಲ್ಸ್, ಆರೋಪಿಗಳಲ್ಲೊಬ್ಬ ಸೇಫ್ ಆ್ಯಂಡ್ ರೆಸ್ಕೂ ತಂಡದ ಸದಸ್ಯ, ಏನಿದು ಸೇಫ್ ಆ್ಯಂಡ್ ರೆಸ್ಕ್ಯೂ ?
ಬೆಳ್ಳಾರೆ, ಆಗಸ್ಟ್ 12: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಇದೀಗ 10 ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಹತ್ಯೆಗೆ ಯೋಜನೆ, ಸಹಕಾರ ನೀಡಿದ ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಇನ್ನೂ ಹಲವರು ಈ ಕೃತ್ಯದಲ್ಲಿ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಭಾಗಿಯಾಗಿರುವ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಜುಲೈ 26 ರಂದು ಬೆಳ್ಳಾರೆಯ ತನ್ನ ಕೋಳಿ ಅಂಗಡಿಯಲ್ಲಿ ಇದ್ದ ಪ್ರವೀಣ್ ನೆಟ್ಟಾರು ಮೇಲೆ ಬೈಕಿನಲ್ಲಿ ಬಂದ ಮೂವರ ತಂಡ ತಲವಾರಿನಲ್ಲಿ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಪ್ರವೀಣ್ ಹತ್ಯೆಯನ್ನು ಗಂಭೀರವಾಗಿ ತೆಗೆದುಕೊಂಡ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ಆರೋಪಿಗಳ ಪತ್ತೆಗಾಗಿ ಆರು ವಿಶೇಷ ಪೋಲೀಸ್ ತಂಡವನ್ನು ರಚಿಸಿದ್ದರು. ಅಲ್ಲದೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಎಡಿಜಿಪಿ ಅಲೋಕ್ ಕುಮಾರ್ ಜಿಲ್ಲೆ ಹಾಗು ಹೊರ ಜಿಲ್ಲೆಗಳ ಪೋಲೀಸ್ ತಂಡಗಳನ್ನೂ ತನಿಖೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರವೀಣ್ ನೆಟ್ಟಾರು ಹತ್ಯೆಯ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.
1:ಸವಣೂರು ನಿವಾಸಿ ಜಾಕಿರ್ (29)
2:ಬೆಳ್ಳಾರೆ ನಿವಾಸಿ ಶಫೀಕ್ (27)
3:ಬೆಳ್ಳಾರೆ ಪಳ್ಳಿಮೊಗರು ನಿವಾಸಿ ಸದ್ದಾಂ(32)
4:ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್ (42)
5:ಸುಳ್ಯದ ನಾವೂರು ನಿವಾಸಿ ಹಬೀದ್ (22)
6:ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28)
7:ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33)
8:ಸುಳ್ಯ ನಿವಾಸಿ ಶಿಹಾಬುದ್ದೀನ್(33)
9:ಪುತ್ತೂರಿನ ಅಂಕತ್ತಡ್ಕ ನಿವಾಸಿ ರಿಯಾಝ್(27)
10:ಸುಳ್ಯದ ಎಲಿಮಲೆ ನಿವಾಸಿ ಬಶೀರ್(28)
ಬಂಧಿತ ಆರೋಪಿಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಆರಂಭಿಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ ಸ್ಪೆಕ್ಟರ್ ಡಿ.ಟಿ.ನಾಗರಾಜ್, ಬಂಟ್ವಾಳ ಎಸ್.ಐ. ಪ್ರಸನ್ನ, ವಿಟ್ಲ ಠಾಣೆಯ ಹೆಚ್.ನಾಗರಾಜ್, ಸಂಪ್ಯ ಠಾಣೆಯ ಉದಯರವಿ, ಸುಳ್ಯ ಸರ್ಕಲ್ ನವೀನ್ ಜೋಗಿ, ಮಡಿಕೇರಿ ಸಿಸಿಬಿ ತಂಡ, ಸಿಐಡಿ ಅಧಿಕಾರಿ ಎಂ.ಎನ್.ಅನುಚೇತ್, ದಕ್ಷಿಣಕನ್ನಡ ಜಿಲ್ಲಾ ಅಡಿಷನ್ ಎಸ್ಪಿ ಕುಮಾರಚಂದ್ರ ತಂಡ ಕಳೆದ 16 ದಿನಗಳಿಂದ ಎಡಬಿಡದೆ ನಡೆಸಿದ ಕಾರ್ಯಾಚರಣೆಯಿಂದಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಬಂಧನವಾಗಿದೆ.
ಹತ್ಯೆಯ ಪ್ರಮುಖ ಆರೋಪಿಯಾಗಿರುವ ಸುಳ್ಯದ ನಿವಾಸಿ ಶಿಹಾಬುದ್ಧೀನ್ ಪಿ.ಎಫ್.ಐ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪಿ.ಎಫ್.ಐ ನ ಸೇಫ್ ಎಂಡ್ ರೆಸ್ಕ್ಯೂ ತಂಡದ ಸದಸ್ಯನಾಗಿರುವ ಶಿಹಾಬುದ್ಧೀನ್ ಗೆ ಪಿ.ಎಪ್.ಐ ನಾಯಕರಿಗೆ ರಕ್ಷಣೆ ನೀಡುವ ಕೆಲಸವನ್ನು ನೀಡಲಾಗಿತ್ತು. ಜುಲೈ 21 ರಂದು ಬೆಳ್ಳಾರೆಯ ಕಳಂಜ ಎಂಬಲ್ಲಿ ಕೇರಳದ ಕಾಸರಗೋಡು ಮೂಲಕ ಮಸೂದ್ ಎಂಬಾತನ ಮೇಲೆ ಹಲ್ಲೆ ನಡೆದಿತ್ತು.
ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಸೂದ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ದಿನವೇ ರಾತ್ರಿ ಶಿಹಾಬುದ್ಧೀನ್ ಬೆಳ್ಳಾರೆಯಲ್ಲಿ ಬಂಧಿತ ಇತರೇ ಆರೋಪಿಗಳ ಜೊತೆ ಸೇರಿ ಮೀಟಿಂಗ್ ಮಾಡಿದ್ದ. ಒಂದು ವೇಳೆ ಮಸೂದ್ ಸಾವನ್ನಪ್ಪಿದ್ದೇ ಆದರೆ ಆತನ ಸಾವಿಗೆ ಇನ್ನೊಂದು ಹೆಣವನ್ನು ಉರುಳಿಸುವ ಪಣವನ್ನೂ ಆತ ತೊಟ್ಟಿದ್ದ. ಮಸೂದ್ ಸಾವನ್ನಪ್ಪಿದ ಸುದ್ಧಿ ತಿಳಿಯುತ್ತಿದ್ದಂತೇ ಅಲರ್ಟ್ ಆದ ಶಿಹಾಬುದ್ಧೀನ್ ಜುಲೈ 24 ರಂದು ಸುಳ್ಯದ ಪಿ.ಎಫ್.ಐ ಕಛೇರಿಗೆ ಇತರ ಆರೋಪಿಗಳನ್ನು ಕರೆಸಿ ಇನ್ನೊಂದು ಸುತ್ತಿನ ಮೀಟಿಂಗ್ ಮಾಡಿದ್ದ.
ಆ ಮೀಟಿಂಗ್ ನಲ್ಲಿ ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡ ಇಲ್ಲವೇ ಬಿಜೆಪಿಯಲ್ಲಿ ಗುರುತಿಸಿಕೊಂಡ ಪ್ರಮುಖರೊಬ್ಬರನ್ನು ಬಲಿ ಪಡೆಯುವ ಅಜೆಂಡಾವನ್ನೂ ಇಟ್ಟುಕೊಳ್ಳಲಾಗಿತ್ತು. ಪ್ರವೀಣ್ ನೆಟ್ಟಾರು ಜೊತೆಗೆ ಇನ್ನೂ ಹಲವರ ಪಟ್ಟಿ ತಯಾರಿಸಿದ್ದ ಹಂತಕರ ತಂಡ ತಮಗೆ ಸುಲಭವಾಗಿ ಸಿಗುವವರನ್ನು ಮೊದಲು ಟಾರ್ಗೆಟ್ ಮಾಡಲು ನಿರ್ಧರಿಸಿತ್ತು. ಅದೇ ಪ್ರಕಾರ ಪ್ರವೀಣ್ ನೆಟ್ಟಾರನ್ನು ಬಲಿ ತೆಗೆಯಲು ನಿರ್ಧರಿಸಿದ್ದ ಹಂತಕರ ತಂಡ ಮೂರು ಬಾರಿ ಪ್ರವೀಣ್ ಹತ್ಯೆಗೆ ಸ್ಕಚ್ ಹಾಕಿತ್ತು.
ಜುಲೈ 24 ರಂದು ಪ್ರವೀಣ್ ನೆಟ್ಟಾರು ನಡೆಸುತ್ತಿದ್ದ ಕೋಳಿ ಅಂಗಡಿಯ ಬಳಿ ಹೊಂಚು ಹಾಕಿ ನಿಂತಿದ್ದ ಹಂತಕರಿಗೆ ಅಂದು ಪ್ರವೀಣ್ ಸಿಕ್ಕಿರಲಿಲ್ಲ. ಅದೇ ಪ್ರಕಾರ ಜುಲೈ 25 ರ ರಾತ್ರಿ ಮತ್ತೆ ಅದೇ ಪ್ರದೇಶದಲ್ಲಿ ಪ್ರವೀಣ್ ಗಾಗಿ ಹಂತಕರ ತಂಡ ಕಾದು ಕುಳಿತಿದೆ. ಆದರೆ ಅಂದೂ ಕೂಡಾ ಪ್ರವೀಣ್ ಹಂತಕರ ಕೈಗೆ ಸಿಕ್ಲಿರಲಿಲ್ಲ. ಆದರೆ ಜುಲೈ 26 ರಂದು ಪ್ರವೀಣ್ ಅದೃಷ್ಟ ಕೈ ಕೊಟ್ಟಿತ್ತೋ ಏನೋ. ಬೆಳ್ಳಾರೆಯಿಂದ ಸವಣೂರು ಹೋಗುವ ದಾರಿಯ ಪೆರುವಾಜೆ ದೇವಸ್ಥಾನದ ದ್ವಾರದ ಬಳಿ ಕಾದು ಕುಳಿತ ತಂಡಕ್ಕೆ ಪ್ರವೀಣ್ ಸುಲಭವಾಗಿ ಸಿಕ್ಕಿದ್ದಾರೆ. ಏಕಾಏಕಿ ಪ್ರವೀಣ್ ತಲೆ ಮೇಲೆ ತಲವಾರು ಬೀಸಿ ಹಂತಕರು ಪ್ರವೀಣ್ ನನ್ನು ಹತ್ಯೆ ಮಾಡಿದ್ದಾರೆ.
ಬೈಕ್ ಮೂಲಕ ಬಂದಿದ್ದ ಮೂವರ ತಂಡ ಈ ಕೃತ್ಯ ನಡೆಸಿತ್ತು. ಬೈಕ್ ಅನ್ನು ಚಲಾಯಿಸಲು ರಿಯಾಝ್ ನನ್ನು ನೇಮಿಸಿದ್ದು, ಬಶೀರ್ ಮತ್ತು ಶಿಹಾಬುದ್ಧೀನ್ ತಲವಾರು ದಾಳಿ ನಡೆಸುವುದು ಎಂದು ಮೊದಲೇ ನಿಗದಿಯಾದಂತೆ ಹತ್ಯೆ ನಡೆದಿತ್ತು. ಕೊಲೆ ನಡೆಸಿದ ಬಳಿಕ ಹಂತಕರ ತಂಡ ಬೈಕ್ ಮೂಲಕ ಪೆರುವಾಜೆ, ಸವಣೂರು ಮಾರ್ಗವಾಗಿ ಅಜ್ಞಾತ ಸ್ಥಳವೊಂದಕ್ಕೆ ಸೇರಿದೆ. ಆ ಬಳಿಕ ಹಂತಕರು ಮಂಗಳೂರಿಗೆ ಹೋಗಿದ್ದು, ಅಲ್ಲಿಂದ ಕಾಸರಗೋಡಿನ ಮಾಲಿಕ್ ದಿನಾರ್ ಮಸೀದಿಗೆ ಹೋಗಿತ್ತು. ಅಲ್ಲಿಂದ ಕೇರಳದ ಹಲವು ತಿರುವನಂತಪುರ ಸೇರಿದಂತೆ ಹಲವು ಕಡೆಗಳಿಗೆ ಓಡಾಡಿತ್ತು.
ತಮ್ಮ ಸುಳಿವು ಪೋಲೀಸರಿಗೆ ದೊರೆಯದಂತೆ ತಂಡ ನಿರಂತರವಾಗಿ ತಮ್ಮ ನೆಲೆಯನ್ನು ಬದಲಾಯಿಸುತ್ತಲೇ ಇದ್ದಿದ್ದು, ಕೊನೆಗೆ ಒಂದು ಕಡೆ ಪೋಲೀಸ್ ತಂಡ ಮೂವರನ್ನು ಹೆಡೆಮುರಿ ಕಟ್ಟಿ ಕರೆ ತಂದಿದೆ. ಶಿಹಾಬುದ್ಧೀನ್ ಗೆ ಜಿಲ್ಲೆ ಸೇರಿದಂತೆ ರಾಜ್ಯ ಮಟ್ಟದಲ್ಲೂ ಗುರುತಿಸಿಕೊಂಡಿರುವ ಕೆಲವು ಪಿ.ಎಫ್.ಐ ಮುಖಂಡರ ಜೊತೆ ಸಂಪರ್ಕವಿರುವ ಮಾಹಿತಿಯೂ ಪೋಲೀಸರಿಗೆ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲೂ ಪೋಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಕಳೆದ 16 ದಿನಗಳಿಂದ ಅನ್ನ- ನೀರು- ನಿದ್ದೆಯಿಲ್ಲದೆ ಆರೋಪಿಗಳನ್ನು ಬಂಧಿಸಿದ ಪೋಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ಸಲ್ಲಬೇಕಿದ್ದು, ಸರಕಾರ ಈ ಕಾರ್ಯಾಚರಣೆ ನಡೆಸಿದ ತಂಡವನ್ನು ಗುರುತಿಸುವ ಅಗತ್ಯವೂ ಇದೆ.
You must be logged in to post a comment Login