DAKSHINA KANNADA
ಬಿಜೆಪಿ ಅಭ್ಯರ್ಥಿ..ಕಾಂಗ್ರೇಸ್ ಪಾಳಯದಲ್ಲಿ ?

ಮಂಗಳೂರು ಸೆಪ್ಟಂಬರ್ 2: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಂಗಳೂರು ದಕ್ಷಿಣ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯೋರ್ವರು ಕಾಂಗ್ರೇಸ್ ಪಾಳಯದಲ್ಲಿ ಗುರುತಿಸಿಕೊಂಡಿರುವುದು ಇದೀಗ ಬಿಜೆಪಿ ವಲಯದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಚುನಾವಣೆಯಲ್ಲಿ ಕರಾವಳಿಯ ಎಲ್ಲಾ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಪ್ಲಾನ್ ನಲ್ಲಿರುವ ಬಿಜೆಪಿ ಇದೆ.
ಇದೀಗ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಉದ್ಯಮಿ ಹಾಗೂ ಪ್ರಸಕ್ತ ಬಿಜೆಪಿಯ ಕೈಗಾರಿಕಾ ಪ್ರಕೋಷ್ಟದ ಅಧ್ಯಕ್ಷರಾಗಿರುವ ಮಂಗಳೂರು ಮೂಲದ ಬದ್ರಿನಾಥ ಕಾಮತ್ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿದೆ ಎನ್ನುವ ಮಾಹಿತಿ ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆ. ಆದರೆ ಈ ಬದ್ರಿನಾಥ ಕಾಮತ್ ಮಾತ್ರ ಹೆಚ್ಚಾಗಿ ಕಾಂಗ್ರೇಸ್ ಪಾಳಯದಲ್ಲೇ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಹಾಗೂ ಈ ಕುರಿತ ಅಸಮಾಧಾನದ ಗುಸುಗುಸು ಚರ್ಚೆಗಳೂ ಎಲ್ಲೆಡೆ ಹರಿದಾಡುತ್ತಿದೆ.

ಅಂದ ಹಾಗೆ ಈ ಚರ್ಚೆಗೆ ನಾಂದಿ ಹಾಕಿದ್ದು, ಸೆಪ್ಟಂಬರ್ 1 ರಂದು ಮಂಗಳೂರಿಗೆ ಭೇಟಿ ನೀಡಿದ ಚಿತ್ರನಟಿ ರಾಗಿಣಿ ದ್ವಿವೇದಿ. ಹೌದು ಮಂಗಳೂರಿಗೆ ಭೇಟಿ ನೀಡಿದ ರಾಗಿಣಿ ಸೀದಾ ಹೋಗಿದ್ದು ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶಕ ಸದಸ್ಯರಾದ ರಾಮದಾಸ್ ಪ್ರಭು ಅವರ ಮನೆಗೆ. ರಾಮದಾಸ್ ಪ್ರಭುಗಳಿಗೆ ನಾಣ್ಯಗಳ ಸಂಗ್ರಹದ ಹವ್ಯಾಸವಿದ್ದು, ಈ ನಾಣ್ಯಗಳನ್ನು ನೋಡಲು ಚಿತ್ರ ನಟಿ ರಾಗಿಣಿ ದ್ರಿವೇದಿ ಅವರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ಮಂಗಳೂರು ದಕ್ಷಿಣ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯೆಂದೇ ಗುರುತಿಸಲ್ಪಟ್ಟಿದ್ದಾರೆನ್ನಲಾಗಿರುವ ಬದ್ರಿನಾಥ ಕಾಮತ್ ಕೂಡಾ ನಟಿ ಜೊತೆಗಿದ್ದರು.
ಅಲ್ಲದೆ ಇದೀಗ ಈ ಬದ್ರಿನಾಥ ಕಾಮತ್ ಮಾಜಿ ಸಚಿವ ಹಾಗೂ ಕಾಂಗ್ರೇಸ್ ಮುಖಂಡ ಅಂಬರೀಷ್ ಜೊತೆಗೂ ನಿಕಟ ಸಂಬಂಧವನ್ನಿರಿಸಿಕೊಂಡಿರುವ ಫೋಟೋಗಳೂ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದ್ದು, ಬಿಸಿ ಚರ್ಚೆಗೂ ಗ್ರಾಸವಾಗಿದೆ. ರಾಜ್ಯ ಚುನಾವಣೆಗೆ ಇನ್ನು ಆರೇ ತಿಂಗಳಿರುವಾಗ ರಾಜಕೀಯವಾಗಿ ಕಾಂಗ್ರೇಸ್ ನ ಬದ್ಧ ವೈರಿಯಾಗಿರುವ ಬಿಜೆಪಿಯ ಪ್ರಮುಖ ಸ್ಥಾನದಲ್ಲಿರುವ ಮುಖಂಡನೊಬ್ಬ ಇದೀಗ ತನ್ನ ಬದ್ಧ ವೈರಿಯೆನಿಸಿಕೊಂಡ ಕಾಂಗ್ರೇಸ್ ಮುಖಂಡರ ಜೊತೆಗೆ ಕುಚುಕೂ ಕುಚುಕೂ ಆಡುತ್ತಿರುವುದು ಬಿಜೆಪಿಯ ಕಟ್ಟಾಳುಗಳಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.
ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಾ ಮುಖಂಡನನ್ನಾಗಿ ಮಾಡಿದ ವ್ಯಕ್ತಿ ಈಗ ಕಾರ್ಯಕರ್ತರಿಗೆ ಅವಮಾನವಾಗುವ ರೀತಿಯಲ್ಲಿ ಹಾಗೂ ಪಕ್ಷ ನಿಷ್ಟೆಗೆ ವಿರುದ್ಧವಾಗಿ ವ್ಯವಹರಿಸುತ್ತಿದ್ದಾರೆ ಎನ್ನುವ ಆರೋಪಗಳೂ ಇದೀಗ ಬಿಜೆಪಿ ವಲಯದಿಂದ ಕೇಳಿಬರುತ್ತಿದೆ. ಚುನಾವಣೆಗೆ ಮೊದಲೇ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯೆನಿಸಿಕೊಂಡವರ ಮೇಲೆ ಈ ರೀತಿಯ ಆರೋಪಗಳು ಕೇಳಿಬರುತ್ತಿರುವುದು ಬಿಜೆಪಿ ಜಿಲ್ಲಾ ಘಟಕದ ತಲೆ ನೋವಿಗೂ ಕಾರಣವಾಗಿದೆ ಎನ್ನಲಾಗಿದೆ. ಬಿಜೆಪಿಗಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ಕಾರ್ಯಕರ್ತರು ಇಂಥಹ ವಿಚಾರಗಳು ಬಂದಾಗ ಈ ಹಿಂದೆಯೂ ವಿಚಲಿತರಾಗಿದ್ದು, ಈ ಬಾರಿ ಮತ್ತೆ ವಿಚಲಿತರಾಗುವ ಪ್ರಮೇಯ ಎದುರಾಗಿದೆ.