LATEST NEWS
ಬಿಜೆಪಿ ರಾಜ್ಯಾದ್ಯಕ್ಷ ಹುದ್ದೆ ಒಳಜಗಳದ ನಡುವೆ ಬಿಜೆಪಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಶಾಕ್
ಕಾರ್ಕಳ ಜನವರಿ 19: ರಾಜ್ಯಾಧ್ಯಕ್ಷ ವಿಚಾರಕ್ಕೆ ಬಿಜೆಪಿಯಲ್ಲಿ ನಡೆಯುತ್ತಿರುವ ಒಳ ಜಗಳಕ್ಕೆ ಇದೀಗ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತೊಂದು ಶಾಕ್ ನೀಡಿದ್ದಾರೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲು ಮುಂದಾಗಿದೆ. ಈ ಬಗ್ಗೆ ಸ್ವತಃ ಅವರೇ ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್ಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೆಲವು ದಿನಗಳ ಹಿಂದೆಯೇ ಅವರು ಪಕ್ಷದ ಪ್ರಮುಖರು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಲ್ಲಿ ಮೌಖಿಕವಾಗಿ ಕೋರಿಕೊಂಡಿದ್ದರು ಎನ್ನಲಾಗುತ್ತಿದೆ. ಸುನಿಲ್ ಅವರ ಈ ವಿಮುಖತೆಗೆ ಬಣ ರಾಜಕಾರಣ ಕಾರಣವಲ್ಲ, ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಳ್ಳುವುದು ಕಷ್ಟವಾಗುತ್ತಿರುವುದರಿಂದ ಈ ನಿರ್ಣಯಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ಆಯಕಟ್ಟಿನದು. ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ಮಾತ್ರ ಈ ಹುದ್ದೆಗೆ ನಿಯೋಜನೆ ಮಾಡಲಾಗುತ್ತದೆ. ಸುನಿಲ್ ಕುಮಾರ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಹಾಗೂ ಪಿ. ರಾಜೀವ್ ಸದ್ಯ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸಂಘಟನಾತ್ಮಕ ಹಿನ್ನೆಲೆಯಿಂದ ಬಂದ ಸುನಿಲ್ ಹಾಗೂ ವಿಜಯೇಂದ್ರ ನಡುವೆ “ವಿರಸವೂ ಅಲ್ಲದ, ಸಮರಸವೂ ಅಲ್ಲದ’ ತಟಸ್ಥ ಸಂಬಂಧವಿದೆ. ಆದಾಗಿಯೂ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕೋರಿಕೆಯನ್ನು ಪಕ್ಷ ಪರಿಗಣಿಸಿದೆಯೋ ಇಲ್ಲವೋ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಯಿಂದ ಇಳಿದ ಬಳಿಕ ಹೈಕಮಾಂಡ್ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿತ್ತು. ಬಳಿಕ ವಿಜಯೇಂದ್ರ ತಮ್ಮದೇ ಒಂದು ತಂಡ ಕಟ್ಟಿದ್ದಾರೆ. ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕರುಗಳಿಗೆ ಆಯಾ ಕಟ್ಟಿನ ಹುದ್ದೆ ನೀಡಿದ್ದಾರೆ. ಅದರಂತೆ ಸುನಿಲ್ ಕುಮಾರ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಆದ್ರೆ, ಇದೀಗ ಅದ್ಯಾಕೋ ಸುನಿಲ್ ಕುಮಾರ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೊರೆಯಲು ಮುಂದಾಗಿದೆ ಎನ್ನಲಾಗಿದೆ.