DAKSHINA KANNADA
‘ಭ್ರಷ್ಟಾಚಾರಿಗಳಿಗೆ ಬಿಜೆಪಿಯೇ ಭರವಸೆ’: ಯು.ಟಿ.ಖಾದರ್
ಮಂಗಳೂರು, ಮಾರ್ಚ್ 06: ‘ಬಿಜೆಪಿಯವರು ಬೀದಿ ಬೀದಿಗಳಲ್ಲಿ ‘ಬಿಜೆಪಿಯೇ ಭರವಸೆ’ ಎಂಬ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಅದನ್ನು ‘ಭ್ರಷ್ಟಾಚಾರಿಗಳಿಗೆ ಬಿಜೆಪಿಯೇ ಭರವಸೆ’ ಎಂದು ಬದಲಾಯಿಸಬೇಕಾಗಿದೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಸರ್ಕಾರದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಆರೋಪ ಕೇಳಿಬಂದಾಗಲೆಲ್ಲ ಆ ಪಕ್ಷದ ಮುಖಂಡರು ಸಾಕ್ಷ್ಯ ಕೇಳುತ್ತಿದ್ದರು. ಅವರದ್ದೇ ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ರಾಶಿ ರಾಶಿ ಹಣ ಸಿಕ್ಕಿದ್ದಕ್ಕಿಂತಲೂ ದೊಡ್ಡ ಸಾಕ್ಷ್ಯದ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದರು.
‘ವಿರೂಪಾಕ್ಷ ಅವರನ್ನು ತಕ್ಷಣ ಬಂಧಿಸಬೇಕು. ಪ್ರಕರಣದ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು. ಮಂಗಳೂರು ಕ್ಷೇತ್ರದಲ್ಲಿ ಎಸ್‌ಡಿಪಿಐನಿಂದ ರಿಯಾಜ್ ಫರಂಗಿಪೇಟೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಖಾದರ್, ‘ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು.
ಕ್ಷೇತ್ರದ ಜನರು ಸೌಹಾರ್ದಪ್ರಿಯರು. ಸಮಸ್ಯೆ ಸೃಷ್ಟಿಸುವವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಜನ ಅವರನ್ನು ಸೋಲಿಸುತ್ತಾರೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಹಮ್ಮದ್ ಕುಂಜತ್ತಬೈಲ್, ಶಶಿಧರ ಹೆಗ್ಡೆ, ಉದಯ್ ಆಚಾರ್ಯ ಇದ್ದರು.