LATEST NEWS
ಕಾಂಗ್ರೆಸ್ಸಿಗೆ ವರದಾನವಾಗಲಿದೆಯೇ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಆಂತರಿಕ ಕಲಹ
ಕಾಂಗ್ರೆಸ್ಸಿಗೆ ವರದಾನವಾಗಲಿದೆಯೇ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಆಂತರಿಕ ಕಲಹ
ಮಂಗಳೂರು, ಎಪ್ರಿಲ್ 05 : ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಆಯ್ದ ಪ್ರಮುಖ ಕ್ಷೇತ್ರಗಳಿಗೆ ಅರ್ಹ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ದತೆಗಳನ್ನು ನಡೆಸುತ್ತಿವೆ.
ಕರಾವಳಿಯ ಪ್ರಮುಖ ವಾಣಿಜ್ಯ ನಗರವಾಗಿರುವ ಮಂಗಳೂರಿನಲ್ಲೂ ಲಾಭಿ ಜೋರಾಗಿಯೇ ಇದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿರುವ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮರಳಿ ಪಡೆಯಲು ಬಿಜೆಪಿ ಯತ್ನಗಳನ್ನು ನಡೆಸುತ್ತಿದ್ದು, ಅದಕ್ಕಾಗಿ ಅರ್ಹ ಅಭ್ಯರ್ಥಿಯ ಹುಡುಕಾಟದಲ್ಲಿದೆ.
ಬಿಜೆಪಿ ಗೆ ಈ ವಿಚಾರ ಬಿಸಿತುಪ್ಪವಾಗಿ ಪರಿಣಮಿಸಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ಪಾಳಯದಲ್ಲಿ ಭಾರೀ ಮಟ್ಟದಲ್ಲಿ ಲಾಬಿ ಆರಂಭವಾಗಿವೆ.
ಗೌಡ ಸಾರಸ್ವತ ಬ್ರಾಹ್ಮಣ (ಜಿ ಎಸ್ ಬಿ) ಸಮುದಾಯವನ್ನು ಪ್ರತಿನಿಧಿಸುತ್ತಿರುವ ಬದ್ರಿನಾಥ್ ಕಾಮತ್ ಮತ್ತು ಬಿಜೆಪಿ ಯುವ ನಾಯಕ ವೇದವ್ಯಾಸ ಕಾಮತ್ ನಡುವೆ ಈ ಟಿಕೆಟಿಗಾಗಿ ತೀವ್ರವಾದ ಪೈಪೋಟಿ ಆರಂಭವಾಗಿದೆ.
ಇದೇ ಸಮುದಾಯದ ಮತ್ತು ಹಿಂದೆ ಬಿಜೆಪಿಯಲ್ಲಿದ್ದು ಪ್ರಭಾವಿಯಾಗಿದ್ದ ಮತ್ತೋರ್ವ ಮುಖಂಡ ಶ್ರೀಕರ್ ಪ್ರಭು ಬಿಜೆಪಿ ಪಕ್ಷದ ಸಿದ್ದಾಂತಗಳೊಂದಿಗೆ ಪಕ್ಷೇತರರಾಗಿ ಚುನಾವಣೆಯ ಕಣಕ್ಕೆ ಧುಮುಕಲು ರೆಡಿಯಾಗಿದ್ದಾರೆ.
ಬಿಜೆಪಿಯ ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್ ಗೆ ವರದಾನ ವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರದಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಸುಗಮವಾಗಲಿದೆ.
ಬಿಜೆಪಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಈ ಪೈಪೋಟಿಯಿಂದ ಚುನಾವಣೆಯಲ್ಲಿ ಹಿಂದುತ್ವದ ಮತಗಳು ವಿಭಜನೆಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಕಾಂಗ್ರೆಸ್ ನ ಜೆ. ಆರ್ . ಲೋಬೊ ಈ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದಾರೆ.
ಈ ಬಾರಿ ಜೆ. ಆರ್. ಲೋಬೊ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ಸಿನಲ್ಲಿ ಲೋಬೋ ಸ್ಪರ್ಧೆಗೆ ಹೇಳಿಕೊಳ್ಳುವಂತಹ ಸ್ಪರ್ಧಿಗಳು ಕಡಿಮೆ.
ಲೋಬೋ ಶಾಸಕರಾಗಿ ರ ಇತ್ತೀಚಿನ ದಿನಗಳಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು, ಕೆಲಸದ ವೇಗ ಹಾಗೂ ಜನರಿಗೆ ಸ್ಪಂದಿಸುವ ರೀತಿ ಗೆಲುವಿಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಎರಡು ದಶಕಗಳಿಂದ ಬಿಜೆಪಿಯ ಭದ್ರ ಕೋಟೆಯಾಗಿದ್ದ ಈ ಮಂಗಳೂರು ದಕ್ಷಿಣ ಕ್ಷೇತ್ರವನ್ನು ಬಿಜೆಪಿ ಕಳೆದ ಬಾರಿ ಕಳೆದು ಕೊಂಡಿತ್ತು.
ಅಂದು ಆಡಳಿತ ನಡೆಸುತ್ತಿದ್ದ ಬಿಜೆಪಿ ಸರಕಾರದ ವಿರೋಧಿ ಅಲೆ ಲೋಬೊ ಅವರ ಅವರ ಗೆಲುವಿಗೆ ಕಾರಣವಾಗಿತ್ತು.
1989 ರಲ್ಲಿ ಕಾಂಗ್ರೆಸ್ ನ ಬ್ಲೇಸಿಯಸ್ ಡಿಸೋಜಾ ಗೆದ್ದ ಬಳಿಕ ಈ ಕ್ಷೇತ್ರದಲ್ಲಿ ಸತತ 4 ಬಾರಿ ಬಿಜೆಪಿಯ ಯೋಗಿಶ್ ಭಟ್ ಗೆದ್ದು ಬಿಜೆಪಿಯ ಭದ್ರಕೋಟೆಯನ್ನಾಗಿಸಿತ್ತು.
ಆದರೆ ಕಳೆದ ಬಾರಿ ಜೆ.ಆರ್ ಲೋಬೊ ಎದುರು ಯೋಗಿಶ್ ಭಟ್ ಸೋತಿದ್ದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಮತಗಳು ಹೆಚ್ಚಿವೆ ಆದರೆ ಜಿ ಎಸ್ ಬಿ ಸಮುದಾಯದ ಮತಗಳು ಅಭ್ಯರ್ಥಿಗಳ ಗೆಲುವಿಗೆ ಇಲ್ಲಿ ನಿರ್ಣಾಯಕ.
ಅದರಲ್ಲಿ ಅತೀ ಹೆಚ್ಚಿನವು ಬಿಜೆಪಿ ಮತಗಳೇ ಆಗಿವೆ.
ಬಿಜೆಪಿ ಈ ಆಂತರಿಕ ಕಲಹ ದಿಂದ ಈ ಸಮುದಾಯದ ಮತಗಳು ವಿಭಾಜನೆ ಗೊಂಡರೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಕನಸಿನ ಮಾತು ಎಂದು ಹೇಳಲಾಗುತ್ತಿದೆ.
ಬಿಜೆಪಿ ವೇದವ್ಯಾಸ್ ಕಾಮತ್ ಗೆ ಟಿಕೆಟ್ ನೀಡಿದರೆ ಬದ್ರಿನಾಥ್ ಕಾಮತ್ ಬೆಂಬಲಿಗರು ವೇದವ್ಯಾಸ್ ಕಾಮತ್ ವಿರುದ್ದವಾಗಿ ಕೆಲಸ ಮಾಡಲಿದ್ದಾರೆ ಎನ್ನುವುದು ರಹಸ್ಯವಾಗಿ ಉಳಿದಿಲ್ಲ.
ಆದರೆ ಬದ್ರಿನಾಥ್ ಕಾಮತ್ ಗೆ ಟಿಕೆಟ್ ದೊರಕಿದ್ದೆ ಆದಲ್ಲಿ ವೇದವ್ಯಾಸ್ ಕಾಮತ್ ಬೆಂಬಲಿಗರ ಪಡೆ ಬದ್ರಿನಾಥ್ ಕಾಮತ್ ವಿರುದ್ದ ಕಣಕ್ಕಿಳಿಯುವುದಂತೂ ಗ್ಯಾರಂಟಿ.
ಇವರ ಪ್ರಭಾವಿ ನಾಯಕ ಶ್ರೀಕರ್ ಪ್ರಭು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಕೈ ಸುಟ್ಟುಕೊಳ್ಳುವುದು ಮಾತ್ರ ಬಿಜೆಪಿ.
ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಿಜೆಪಿ ಹೈ ಕಮಾಂಡ್ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲಕ್ಕೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.