LATEST NEWS
ಕನಕ ದುರ್ಗಾ ಮತ್ತು ಬಿಂದು ಫೆಬ್ರವರಿ 12ರಂದು ಮತ್ತೆ ಶಬರಿಮಲೆಗೆ

ಕನಕ ದುರ್ಗಾ ಮತ್ತು ಬಿಂದು ಫೆಬ್ರವರಿ 12ರಂದು ಮತ್ತೆ ಶಬರಿಮಲೆಗೆ
ಕೇರಳ ಫೆಬ್ರವರಿ 8: ಕಳೆದ ಜನವರಿ 2 ರಂದು ಮುಂಜಾನೆ ಶಬರಿಮಲೆ ಪ್ರವೇಶಿಸಿ ಕೇರಳದಾದ್ಯಂತ ಗಲಭೆಗಳಿಗೆ ಕಾರಣರಾಗಿದ್ದ ಕನಕದುರ್ಗಾ ಮತ್ತು ಬಿಂದು ಈಗ ಮತ್ತೆ ಫೆಬ್ರವರಿ 12 ರಂದು ಶಬರಿಮಲೆ ಪ್ರವೇಶಕ್ಕೆ ಚಿಂತನೆ ನಡೆಸಿದ್ದಾರೆ.
ಈ ಕುರಿತಂತೆ ನ್ಯೂಸ್ ಮಿನಿಟ್ ವೆಬ್ ಸೈಟ್ ವರದಿ ಮಾಡಿದ್ದು, 50 ವರ್ಷ ವಯಸ್ಸಿನ ಒಳಗಿನ ಮಹಿಳೆಯರಿಗೆ ಸುಪ್ರೀಂಕೋರ್ಟ್ ಶಬರಿಮಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ನಂತರ ಕನಕದುರ್ಗ ಮತ್ತು ಬಿಂದು ಮೊದಲ ಬಾರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಿ ಅಯ್ಯಪ್ಪ ದರ್ಶನ ಪಡೆದಿದ್ದರು. ಕೇರಳ ಸರಕಾರ ಹಿಂಬಾಗಿಲಿನಿಂದ ಈ ಇಬ್ಬರು ಮಹಿಳೆಯರನ್ನು ಅಯ್ಯಪ್ಪ ದರ್ಶನ ಮಾಡಿಸುವಲ್ಲಿ ಸಫಲವಾಗಿತ್ತು.

ಈ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ ನಂತರ ಕೇರಳದಾದ್ಯಂತ ಘರ್ಷಣೆಗಳು ನಡೆದು , ಹಿಂಸಾಚಾರ ಸಂಭವಿಸಿ ಹಲವಾರು ಮಂದಿ ಗಾಯಗೊಂಡಿದ್ದರು. ಈಗ ಮತ್ತೆ ಫೆಬ್ರವರಿ 12 ರಂದು ಶಬರಿಮಲೆ ಪ್ರವೇಶ ಮಾಡುವುದಾಗಿ ಕನಕದುರ್ಗ ಮತ್ತು ಬಿಂದು ಹೇಳಿಕೆ ನೀಡಿರುವುದು ಅಯ್ಯಪ್ಪ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿ ತೀರ್ಪಿನ ವಿರುದ್ದ ಮೆಲ್ಮನವಿ ಅರ್ಜಿಗಳ ವಿಚಾರಣೆ ನಡೆದಿದ್ದು, ತೀರ್ಪನ್ನ ಕಾಯ್ದಿರಿಸಲಾಗಿದೆ.
ಶಬರಿಮಲೆ ಪ್ರವೇಶಿಸಿ ಬಂದ ಕನಕದುರ್ಗಾ ಹಾಗೂ ಬಿಂದು ಅವರಿಗೆ ಸಾಮಾನ್ಯ ಜೀವನ ನಡೆಸಲು ಕಷ್ಟವಾಗಿದೆ. ಸದಾ 24 ಗಂಟೆಗಳ ಕಾಲ ಪೊಲೀಸ್ ಬಂದೋಬಸ್ತ್ ನಲ್ಲಿ ಜೀವನ ನಡೆಸಬೇಕಾದ ಅನಿವಾರ್ಯತೆ ಬಂದಿದೆ.
ಅಲ್ಲದೆ ಕನಕದುರ್ಗಾ ಅವರನ್ನು ಗಂಡನ ಮನೆಯವರು ಹೊರಹಾಕಿದ್ದು, ಸ್ಥಳೀಯ ನ್ಯಾಯಾಲಯದ ಆದೇಶ ಹಿಡಿದು ಇತ್ತೀಚೆಗೆ ಗಂಡನ ಮನೆಗೆ ವಾಪಾಸ್ ಆಗಿದ್ದರು, ಆದರೆ ಅಷ್ಟರಲ್ಲಿ ಗಂಡನಮನೆಯವರು ಮನೆ ಖಾಲಿ ಮಾಡಿ ಬೆರೆದೆ ಸ್ಥಳಾಂತರಗೊಂಡಿದ್ದರು.