ಬೆಂಗಳೂರು ಅಕ್ಟೋಬರ್ 07: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಬಿಗ್ ಬಾಸ್ ಕನ್ನಡ ಸೀಸನ್ 12 ಬಂದ್ ಆಗಿದೆ. ಇದೀಗ ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ಗೆ ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಬೀಗ ಹಾಕಿದ್ದಾರೆ. ಅದರಿಂದಾಗಿ ಶೋ ನಿಲ್ಲುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದ ಎಲ್ಲ ಸ್ಪರ್ಧಿಗಳನ್ನು ಹೊರಗೆ ಕಳಿಸಲಾಗಿದೆ. ಮುಂದಿನ ನಡೆಯ ಬಗ್ಗೆ ಆಯೋಜಕರು ಚರ್ಚೆ ನಡೆಸಿದ್ದಾರೆ.

ಬಿಗ್ ಬಾಸ್ ಸೀಸನ್- 12 ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕುತ್ತಿದ್ದಂತೆ ಸ್ಪರ್ಧಿಗಳಾದ ಕಾವ್ಯ ಶೈವ, ಗಿಲ್ಲಿ ನಟ, ಡಾಗ್ ಸತೀಶ್, ಚಂದ್ರಪ್ರಭ, ಅಭಿಷೇಕ್, ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ, ಮಂಜು ಭಾಷಿಣಿ, ರಾಶಿಕಾ, ಕಾಕ್ರೋಚ್ ಸುಧಿ, ಮಲ್ಲಮ್ಮ, ನಿರೂಪಕಿ ಜಾಹ್ನವಿ, ಧನುಷ್ ಗೌಡ, ಮುದ್ದು ಲಕ್ಷ್ಮೀ ಖ್ಯಾತಿಯ ನಟ ಧ್ರುವಂತ್, ನಟಿ ಅಶ್ವಿನಿ ಗೌಡ ಸೇರಿ ಎಲ್ಲರೂ ಒಬ್ಬೊಬ್ಬರೇ ಮನೆಯಿಂದ ಹೊರ ಬಂದಿದ್ದಾರೆ.

ಜಾಲಿವುಡ್ ಸ್ಟುಡಿಯೋಸ್ ಮತ್ತು ಎಂಟರ್ಟೇನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೇನ್ ಡೋರ್ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತದವರು ಬೀಗ ಹಾಕಿದ್ದಾರೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್ ಸ್ಟುಡಿಯೋಸ್ ಇದೆ. ಆದರೆ ಪರಿಸರ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ರಾಮನಗರದ ತಹಶೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ಬೀಗ ಜಡಿಯಲಾಗಿದೆ.
ಮುಂದಿನ ತೀರ್ಮಾನ ತೆಗೆದುಕೊಳ್ಳುವ ತನಕ ಎಲ್ಲರನ್ನು ಒಂದು ಕಡೆ ಇರಿಸಲಾಗುತ್ತದೆ. ಬಿಗ್ ಬಾಸ್ ಆಯೋಜಕರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ನ್ಯಾಯಾಲಯ ನೀಡುವ ಆದೇಶದ ಮೇಲೆ ಬಿಗ್ ಬಾಸ್ ಮುಂದಿನ ಭವಿಷ್ಯ ನಿರ್ಧಾರ ಆಗಲಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆ ಖಾಲಿ ಖಾಲಿ ಆಗಿದೆ. ಕೆಲವೇ ಗಂಟೆಗಳ ಹಿಂದೆ ಕಲರ್ಫುಲ್ ಬೆಳಕಿನಿಂದ ಝಗಮಗಿಸುತ್ತಿದ್ದ ದೊಡ್ಮನೆಯಲ್ಲಿ ಈಗ ಕತ್ತಲು ಆವರಿಸಿದೆ.
‘ಬಿಗ್ ಬಾಸ್’ ಶೋ ಬಂದ್ ಮಾಡಿಸಿದ್ದರ ಹಿಂದೆ ಡಿಕೆಶಿ ಕೈವಾಡ : ಜೆಡಿಎಸ್ ಗಂಭೀರ ಆರೋಪ